ಬಿಜೆಪಿಯದ್ದು ಮನುಷ್ಯತ್ವ ಇಲ್ಲದ ಹಿಂದುತ್ವ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-01-09 17:22 GMT

ಮಡಿಕೇರಿ,ಜ.9 : ಕಾಂಗ್ರೆಸ್ ಪಕ್ಷ ಮನುಷ್ಯತ್ವ ಇರುವ ಹಿಂದುತ್ವವನ್ನು ಪರಿಪಾಲನೆ ಮಾಡುತ್ತಿದ್ದು, ಬಿಜೆಪಿ ಮನುಷ್ಯತ್ವ ಇಲ್ಲದ ಮೃಗೀಯ ಮತ್ತು ರಾಕ್ಷಸ ರೂಪದ ಹಿಂದುತ್ವವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೂ ಧರ್ಮದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲವೆಂದು ಹೇಳಿದರು.

ಮಡಿಕೇರಿಯ ಜನರಲ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರುಗಳ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದುತ್ವ ಯಾರ ಅಪ್ಪನ ಮನೆಯ ಆಸ್ತಿಯೂ ಅಲ್ಲ. ಕಾಂಗ್ರೆಸ್ ಎಲ್ಲಾ ಧರ್ಮ, ಜಾತಿಯನ್ನು ಪ್ರೀತಿಸುತ್ತದೆ, ಸಮಾನ ಗೌರವ ಮತ್ತು ಅವಕಾಶವನ್ನು ನೀಡುತ್ತದೆ. ಸಂವಿಧಾನವನ್ನು ಪ್ರತಿಪಾದನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಮನುಷ್ಯತ್ವ ಇರುವ ಹಿಂದುತ್ವಕ್ಕೆ ಗೌರವ ನೀಡುತ್ತದೆ ಎಂದು ತಿಳಿಸಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಡೋಂಗಿ ಹೇಳುವ ಬಿಜೆಪಿಯಲ್ಲಿ ಮುಸಲ್ಮಾನರು, ಕ್ರೈಸ್ತರು, ದಲಿತರು ಎಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ 26 ಮಹಾತ್ಮರ ಮತ್ತು ಮಹನೀಯರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಬ್ರಿಟೀಷರೊಂದಿಗಿನ ಮೂರನೇ ಯುದ್ಧದಲ್ಲಿ ಮೀರ್ ಸಾದಿಕ್‍ ನಿಂದ ಟಿಪ್ಪು ಸುಲ್ತಾನ್ ಸೋಲನ್ನು ಅನುಭವಿಸಬೇಕಾಯಿತು. ಅಂದಿನ ಮೈಸೂರು ರಾಜ್ಯದ ಸ್ವಾತಂತ್ರ್ಯ ಉಳಿಸಿಕೊಳ್ಳುವುದ್ಕಕಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟು ಟಿಪ್ಪು ಯುದ್ಧ ಮಾಡಿದ್ದಾರೆ. ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ತಿಳಿದಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ರಾಮಾಯಣ ಬರೆದ ವಾಲ್ಮೀಕಿ ಜಯಂತಿಯನ್ನು ಆಚರಣೆಗೆ ತಂದದ್ದು ನಮ್ಮ ಸರ್ಕಾರ, ಕರ್ನಾಟಕದ ಆಚಾರ ವಿಚಾರ ಸಂಸ್ಕೃತಿ, ಸಾಹಿತ್ಯದ ಬಗ್ಗೆ ತಿಳುವಳಿಕೆ ಇಲ್ಲದ ಆದಿತ್ಯನಾಥರಿಂದ ನಾವು ಪಾಠ ಕಲಿಯಬೇಕಾದ ಅಗತ್ಯವಿಲ್ಲವೆಂದರು.

ಕಾಂಗ್ರೆಸ್ ಪಕ್ಷದಲಿರುವ ಅನೇಕರು ಹಿಂದುಗಳೇ ಆಗಿದ್ದಾರೆ. ಆದರೆ ನಾವು ಮನುಷ್ಯತ್ವದ ಹಿಂದುತ್ವವನ್ನು ಪಾಲಿಸುತ್ತೇವೆ. ಬಿಜೆಪಿ ಮಂದಿ ರಣಹದ್ದುಗಳಿದ್ದಂತೆ. ಹೆಣದ ಮೇಲೆ ರಾಜಕಾರಣ ಮಾಡುವವರು ಎಂದು ಟೀಕಿಸಿದರು. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರವೆಂದು ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡು ಆರೋಪ ಮಾಡುತ್ತಾರೆ. ನೇರವಾಗಿ ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋದವರು ಈ ಯಡಿಯೂರಪ್ಪ. ಇಂತಹ ಪುಂಗಿ ದಾಸರು ಮತ್ತೆ ಅಧಿಕಾರಕ್ಕೆ ಬರಬೇಕೆ ಎಂದು ಪ್ರಶ್ನಿಸಿದ ಮುಖ್ಯಂತ್ರಿಗಳು, ಇವರು ಅಧಿಕಾರಕ್ಕೆ ಬಂದರೆ ರಾಜ್ಯ ಲೂಟಿಯಾಗುತ್ತದೆ ಎಂದು ಆರೋಪಿಸಿದರು.

ಮುಂದಿನ 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ರಾಹುಲ್ ಗಾಂಧಿ ಜನರ ನಿರೀಕ್ಷೆಯಂತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಶಿವಕುಮಾರ್, ಬಿಜೆಪಿ ಐಟಿ ಸಿಟಿಯಾಗಿರುವ ಬೆಂಗಳೂರನ್ನು ಕ್ರೈಂ ಸಿಟಿಯಾಗಿ ಮಾರ್ಪಟ್ಟಿದೆಯೆಂದು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಬೆಂಗಳೂರು ಕ್ರೈಂ ಸಿಟಿಯಾಗಿದ್ದಲ್ಲಿ ವಿಶ್ವ ಪ್ರವಾಸಿ ದಿನವನ್ನು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಯಾಕೆ ಆಯೋಜಿಸಿದರೆಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ 13 ಸಾವಿರ ಕೋಟಿ ರೂ.ಗಳನ್ನು ವಿನಿಯೋಗಿಸಿದೆಯೆಂದು ತಿಳಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜೈಲಿಗೆ ಹೋಗಿ ಎಂದು ನಾವು ಹೇಳಿರಲಿಲ್ಲ. ಬಿಜೆಪಿಯ ಸಚಿವರುಗಳಿಗೆ ಬ್ಲೂ ಫಿಲಂ ನೋಡಲು ನಾವು ಹೇಳಿಲ್ಲವೆಂದು ಲೇವಡಿ ಮಾಡಿದರು.

ಹಿಂದೂ ಧರ್ಮಕ್ಕೆ ಅಪಚಾರ ಮಾಡುವ ಕಾರ್ಯವನ್ನು ಬಿಜೆಪಿ ಹಾಗೂ ಸಂಘ ಪರಿವಾರ ಮಾಡುತ್ತಿದ್ದು, ಹಿಂದು ಧರ್ಮಕ್ಕೆ ಇವರಿಂದಲೇ ಕೆಟ್ಟ ಹೆಸರು ಬರುತ್ತಿದೆಯೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು. ಯಾವುದೇ ಅಜೆಂಡಾವಿಲ್ಲದ ಬಿಜೆಪಿ ಜನರನ್ನು ಕೆರಳಿಸಿ ಅಶಾಂತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಆದರೆ, ಕಾಂಗ್ರೆಸ್ ಅಭಿವೃದ್ಧಿಯ ಅಜೆಂಡಾದ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ನಂತರ ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಸಾಫ್ಟ್ ಹಿಂದುತ್ವ ಅನುಸರಿಸುತ್ತಿದೆ ಎಂದು ಬಿಜೆಪಿ ಟೀಕಿಸುತ್ತಿದ್ದು, ಹಾರ್ಡ್ ಹಿಂದುತ್ವ ಹಾಗೂ ಸಾಫ್ಟ್ ಹಿಂದುತ್ವ ಎಂದರೇನು ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಹಿಂದುತ್ವ ಕಾಂಗ್ರೆಸ್ ಪಕ್ಷದ್ದು . ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲಿ ಎಂದು ತಿರುಗೇಟು ನೀಡಿದರು. ರಾಹುಲ್ ಗಾಂಧಿ ಅವರು ದೇವಸ್ಥಾನಗಳಿಗೆ ತೆರಳಿದರೆ ಬಿಜೆಪಿಯವರಿಗೆ ಏನು ನಷ್ಟವೆಂದು ಪ್ರಶ್ನಿಸಿದರು. ಜೆಡಿಎಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ಎರಡೂ ಪಕ್ಷಗಳಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂದರು. 

ಉತ್ತರ ಪ್ರದೇಶದಲ್ಲಿ ಆಮ್ಲಜನಕದ ಕೊರತೆಯಿಂದ ನರಳುತ್ತಿದ್ದ ಮಕ್ಕಳನ್ನು ರಕ್ಷಿಸಲಾಗದ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥರು ಕರ್ನಾಟಕಕ್ಕೆ ಪಾಠ ಹೇಳುವ ಅಗತ್ಯವಿಲ್ಲವೆಂದು ಕೆಪಿಸಿಸಿಯ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ 5 ರೂ.ಗೆ ಉಪಹಾರ 10 ರೂ.ಗೆ ಊಟ ನೀಡುವ ಮೂಲಕ ಬಡವರ ಹಸಿವನ್ನು ನೀಗಿಸುತ್ತಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಿನ್ನುವ ಅನ್ನಕ್ಕು ಶೇ.18 ರಷ್ಟು ತೆರಿಗೆ ವಿಧಿಸುತ್ತಿದೆಯೆಂದು ವೇಣುಗೋಪಾಲ್ ಟೀಕಿಸಿದರು. ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸುವುದಾಗಿ ಹೇಳಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯ ಸ್ವಕ್ಷೇತ್ರ ಗುಜರಾತ್‍ನಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭ ಫಲಿತಾಂಶ ಏನಾಯಿತೆಂದು ಪ್ರಶ್ನಿಸಿದ ಅವರು, ಮುಂದಿನ ಕರ್ನಾಟಕ ವಿಧಾನಸಭಾ ಚುಣಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಏನು ಎಂಬುವುದನ್ನು ತೋರಿಸಿಕೊಡುತ್ತೇವೆ ಎಂದರು.

ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಕುಶಾಲನಗರದವರೆಗೆ ರೈಲು ಮಾರ್ಗವನ್ನು ಮಂಜೂರು ಮಾಡಲಾಗಿತ್ತು. ಆದರೆ, ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರ ಹಿಂದಿನ ಯುಪಿಎ ಸರ್ಕಾರದ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಿತೆಂದು ಆರೋಪಿಸಿದರು. ರಾಹುಲ್ ಗಾಂಧಿಯವರು ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ ಬಳಿಕವಷ್ಟೆ ಕುಶಾಲನಗರಕ್ಕೆ ರೈಲು ಸಂಪರ್ಕ ದೊರಕಬಹುದೆಂದು ಹೇಳಿದರು.

ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು, ಎರಡು ಪ್ರತ್ಯೇಕ ತಾಲೂಕು ರಚನೆ ಮಾಡಬೇಕು, ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರದ ಪಾವಿತ್ರ್ಯತೆ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು  ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ, ಕೊಡಗಿನ ಎರಡು ಹೊಸ ತಾಲೂಕು ರಚನೆಯ ಬಗ್ಗೆ ಮುಂಬರುವ ದಿನಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News