ಕುವೆಂಪು ದಲಿತ ಚಳವಳಿಯ ಪ್ರೇರಕ ಶಕ್ತಿಯಾಗಿದ್ದರು: ಪ್ರೊ.ಬಿ.ಎಸ್.ಚಂದ್ರಶೇಖರನ್

Update: 2018-01-09 17:48 GMT

ಮಂಡ್ಯ, ಜ.9: ಕುವೆಂಪುರವರು ಪುರೋಹಿತಶಾಹಿ ವರ್ಗದಿಂದ ದಲಿತರು ಮತ್ತು ಶೂದ್ರರಿಗೆ ಆಗುತ್ತಿದ್ದ ಅನ್ಯಾಯವನ್ನು ತೆರೆದಿಡುವ ಪ್ರಯತ್ನ ಮಾಡಿದರು ಮತ್ತು  ದಲಿತ ಚಳವಳಿಯ ಪ್ರೇರಕ ಶಕ್ತಿಯಾಗಿದ್ದರು ಎಂದು ದಲಿತ ಚಳವಳಿ ಮುಖಂಡ ಬಿ.ಎಸ್.ಚಂದ್ರಶೇಖರನ್ ಹೇಳಿದ್ದಾರೆ.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಸಂಘ, ಜನದನಿ ಸಾಂಸ್ಕೃತಿಕ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕುವೆಂಪು ವಿಶ್ವಮಾನವ ಸಂದೇಶ, ಕಲಾಜಾಥಾ ಹಾಗು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಮೇಲ್ವರ್ಗದವರು ಸಾರ್ವಭೌಮತ್ವ ಸಾಧಿಸಿದ್ದ ಕಾಲಘಟ್ಟದಲ್ಲಿ ಶೂದ್ರ ಸಮುದಾಯದಿಂದ ಬಂದ ಕುವೆಂಪು ಅವರ ಬೆಳವಣಿಗೆಯನ್ನು ಹಲವರು ಸಹಿಸಲಿಲ್ಲ. ಇದರಿಂದ ಕುವೆಂಪು ಹಲವು ಪ್ರತಿರೋಧಗಳನ್ನು ಎದುರಿಸಿದರು. ಆದರೆ, ಅವುಗಳಿಗೆ ಜಗ್ಗಲ್ಲಿಲ್ಲ ಎಂದು ಅವರು ಹೇಳಿದರು.

ಇಪ್ಪತ್ತನೇ ಶತಮಾನದ ಕನ್ನಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಮೇರು ವ್ಯಕ್ತಿತ್ವ ಕುವೆಂಪು. ವಿವಿಧ ಪ್ರಾಕಾರಗಳಲ್ಲಿ ಅವರು ಬರೆದ 70ಕ್ಕೂ ಹೆಚ್ಚು ಕೃತಿಗಳು ಕನ್ನಡಕ್ಕೆ ಘನತೆ, ಗೌರವಗಳನ್ನು ತಂದುಕೊಟ್ಟಿವೆ ಎಂದು ಅವರು ವಿವರಿಸಿದರು.

ಕುವೆಂಪು ಸದಾಕಾಲ ಸಾಹಿತ್ಯ ರಚನೆಯಲ್ಲೇ ತೊಡಗಿಕೊಂಡು ಎಲೆಮರೆ ಕಾಯಿಯಂತಿದ್ದರೂ ಸಮಾಜದಲ್ಲಿ ಆಗುಹೋಗುಗಳನ್ನು ಸೂಕ್ಷ್ಮವಾಗಿ ಮಗನಿಸಿ ಪ್ರತಿಕ್ರಿಯಸುತ್ತಾ ಸಮಾಜದಲ್ಲಿ ವೈಚಾರಿಕ ಸಂಚಲನ ಮೂಡಿಸುತ್ತಿದ್ದರು ಎಂದು ಅವರು ತಿಳಿಸಿದರು.

ವೈಚಾರಿಕತೆ, ವೈಜ್ಞಾನಿಕತೆಯ ಅರಿವು ಮೂಡಿಸುತ್ತಾ ಮೌಢ್ಯತೆಯನ್ನು ವಿರೋಧಿಸಿದರು. ತಳ ಸಮುದಾಯದ ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಡುವ ಚಿಂತಿಸುತ್ತಾ ಜಾಗೃತಿಯನ್ನು ಮೂಡಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕಿದರು. ಆದರೆ, ಅವರ ಆಶಯಗಳು ಸಾಕಾರಗೊಳ್ಳುತ್ತಿಲ್ಲ ಎಂದು ಚಂದ್ರಶೇಖರ್ ವಿಷಾದಿಸಿದರು.

ಜನದನಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೆ.ಜಯರಾಂ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಡಾ.ಬೋರೇಗೌಡ ಚಿಕ್ಕಮರಳಿ ಬೋರೇಗೌಡ ಪ್ರಧಾನ ಉಪನ್ಯಾಸ ನೀಡಿದರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜಾ, ಜಿಲ್ಲಾ ಸಂಚಾಲಕ ಶಿವಕಾಳಯ್ಯ, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಹರೀಶ್‍ಕುಮಾರ್,  ಜನದನಿ ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News