ಲಂಡನ್ ನಲ್ಲಿ ದೇಶದ ಮಾನ ಹರಾಜು ಹಾಕಿದ ಪಶ್ಚಿಮ ಬಂಗಾಳದ ಹಿರಿಯ ಪತ್ರಕರ್ತರು

Update: 2018-01-10 05:07 GMT

ಕೊಲ್ಕತ್ತಾ, ಜ.9; ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜೊತೆ ಲಂಡನ್‌ಗೆ ತೆರಳಿದ್ದ ಪತ್ರಪರ್ತರ ತಂಡದ ಹಿರಿಯ ಸದಸ್ಯರು ಅಲ್ಲಿನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಬೆಳ್ಳಿಪಾತ್ರೆಗಳನ್ನು ಕದ್ದು ಸಿಕ್ಕಿಹಾಕಿಕೊಳ್ಳುವ ಮೂಲಕ ತೀವ್ರ ಮುಜುಗರಕ್ಕೀಡಾದ ಘಟನೆ ನಡೆದಿದೆ.

 ಪತ್ರಕರ್ತರ ಈ ವರ್ತನೆಯು ಹೊಟೇಲ್‌ನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಹೊಟೇಲ್ ಸಿಬ್ಬಂದಿ ಆರಂಭದಲ್ಲಿ ಈ ಬಗ್ಗೆ ಮೌನವಾಗುಳಿಯಲು ನಿರ್ಧರಿಸಿದರೂ ಅದು ಅತಿರೇಕಕ್ಕೆ ತಲುಪಿದಾಗ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ ಘಟನೆಯೂ ನಡೆದಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಮಮತಾ ಬ್ಯಾನರ್ಜಿ ಅವರಿಗಾಗಿ ಲಂಡನ್‌ನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಬ್ಯಾನರ್ಜಿಯವರ ಜೊತೆ ಭೋಜನಕೂಟದಲ್ಲಿ ಭಾರತ ಮತ್ತು ಬ್ರಿಟನ್‌ನ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು. ಮಮತಾ ಅವರ ಜೊತೆ ತೆರಳಿದ್ದ ಪತ್ರಕರ್ತರ ತಂಡದಲ್ಲಿ ಹಿರಿಯ ಪತ್ರಕರ್ತರೇ ಇದ್ದರು. ಮೊದಲಿಗೆ ಒಬ್ಬ ಪತ್ರಕರ್ತರು ಬೆಳ್ಳಿಯ ಚಮಚವನ್ನು ಕಿಸೆಗೆ ಹಾಕಿಕೊಂಡರು. ಇದನ್ನು ಗಮನಿಸಿದ ಇತರ ಕೆಲವು ಪತ್ರಕರ್ತರು ಕೂಡಾ ಬೆಳ್ಳಿಯ ಪಾತ್ರೆಗಳನ್ನು ತಮ್ಮ ಕಿಸೆ ಹಾಗೂ ಚೀಲಗಳಲ್ಲಿ ತುಂಬಲು ಆರಂಭಿಸಿದರು. ಆದರೆ ಈ ಎಲ್ಲಾ ದೃಶ್ಯಗಳನ್ನು ಅಲ್ಲಿಯ ಸಿಸಿ ಕ್ಯಾಮೆರಾಗಳು ಸೆರೆ ಹಿಡಿಯುತ್ತಿರುವುದು ಅವರ ಗಮನಕ್ಕೆ ಬಂದಿರಲಿಲ್ಲ ಎಂದು ತಂಡದಲ್ಲಿದ್ದ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ಭಾರತದಿಂದ ಬಂದ ಗಣ್ಯರಿಗೆ ಮುಜುಗರ ಉಂಟುಮಾಡಬಾರದು ಎಂಬ ಕಾರಣಕ್ಕೆ ಹೊಟೇಲ್ ಸಿಬ್ಬಂದಿ ಎಲ್ಲ ತಿಳಿದಿದ್ದರೂ ಮೌನವಾಗಿರಲು ನಿರ್ಧರಿಸಿದ್ದರು. ಆದರೆ ಪರಿಸ್ಥಿತಿ ಮಿತಿಮೀರಿದಾಗ ಈ ಬಗ್ಗೆ ಪತ್ರಕರ್ತರಿಗೆ ಸೂಚನೆ ನೀಡಿದ ಸಿಬ್ಬಂದಿ ಸಿಸಿ ಕ್ಯಾಮೆರಾವು ಎಲ್ಲವನ್ನೂ ಸೆರೆ ಹಿಡಿದಿರುವುದಾಗಿ ತಿಳಿಸಿದಾಗ ಬಹುತೇಕ ಪತ್ರಕರ್ತರಿಗೆ ಮುಜುಗರವಾಗಿತ್ತು. ಅವರೆಲ್ಲ ತಮ್ಮ ಬಳಿಯಿದ್ದ ಬೆಳ್ಳಿಯ ಪಾತ್ರೆಗಳನ್ನು ಟೇಬಲ್ ಮೇಲೆ ಇಟ್ಟಿದ್ದರು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ.

ಆದರೆ ಒಬ್ಬ ಹಿರಿಯ ಪತ್ರಕರ್ತರು ಮಾತ್ರ ತಾನೇನೂ ತಪ್ಪು ಮಾಡಿಲ್ಲ ಎಂದು ವಾದಿಸಲು ಆರಂಭಿಸಿ ಬೇಕಾದರೆ ತನ್ನ ತಪಾಸಣೆ ನಡೆಸುವಂತೆ ಹೇಳಿದ್ದರು. ಆದರೆ ಅವರು ಅದಕ್ಕೂ ಮೊದಲು ತಮ್ಮ ಬಳಿಯಿದ್ದ ಬೆಳ್ಳಿಯ ಸಾಮಾಗ್ರಿಗಳನ್ನು ಮತ್ತೊಬ್ಬ ಪತ್ರಕರ್ತರ ಚೀಲದೊಳಗೆ ಹಾಕಿರುವುದು ಕೂಡಾ ಕ್ಯಾಮೆರಾದಲ್ಲಿ ದಾಖಲಾಗಿರುವುದು ಅವರಿಗೆ ತಿಳಿದಿರಲಿಲ್ಲ. ಕೋಪಗೊಂಡ ಹೊಟೇಲ್ ಸಿಬ್ಬಂದಿ ಅವರಿಗೆ 50 ಪೌಂಡ್ ದಂಡ ಕಟ್ಟುವ ಸೂಚಿಸಿತು. ಕೊನೆಯಲ್ಲಿ ದಂಡ ಕಟ್ಟಿದ ಆ ಪತ್ರಕರ್ತ ಹೊಟೇಲ್‌ನಿಂದ ಹೊರನಡೆದರು ಎಂದು ಪತ್ರಿಕೆಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News