ಕಲಬುರ್ಗಿ ಹತ್ಯೆ ಪ್ರಕರಣ: ತನಿಖಾ ಸಂಸ್ಥೆ, ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

Update: 2018-01-10 17:03 GMT

ಹೊಸದಿಲ್ಲಿ, ಜ. 10: ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಟ್ ತನಿಖೆಗೆ ಒಪ್ಪಿಸುವಂತೆ ಕೋರಿ ಅವರ ಪತ್ನಿ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಸಿಬಿಐ, ಎನ್‌ಐಎ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿದೆ. ಎಂ.ಎಂ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ದಾಖಲಿಸಿದ ದೂರನ್ನು ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ, ಆರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ತನಿಖಾ ಸಂಸ್ಥೆ ಹಾಗೂ ಎರಡೂ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿದೆ.

 ತನ್ನ ಪತಿ ಎಂ.ಎಂ. ಕಲಬುರ್ಗಿ, ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ ಹಾಗೂ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಹತ್ಯೆ ನಡುವೆ ಸಾಮ್ಯತೆ ಇದೆ ಎಂದು ಉಮಾ ದೇವಿ ತನ್ನ ವಕೀಲ ಕೃಷ್ಣ ಕುಮಾರ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.

ದಾಬೋಲ್ಕರ್ ಹಾಗೂ ಪನ್ಸಾರೆ ಹತ್ಯೆ ಪ್ರಕರಣ ತನಿಖೆ ನನೆಗುದಿಗೆ ಬಿದ್ದಿದೆ. ಅಪರಾಧಿಗಳನ್ನು ಕಾನೂನಿನ ಮಂದೆ ತರುವಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.

 ಈ ಮೂರು ಹತ್ಯೆ ನಡೆದ ಸ್ಥಳದಲ್ಲಿ ಪತ್ತೆಯಾಗಿದ್ದ ಕಾಟ್ರಿಜ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಈ ಮೂರು ಹತ್ಯೆಯ ನಡುವೆ ಸಾಮ್ಯತೆ ಇರುವುದು ಬೆಳಕಿಗೆ ಬಂದಿದೆ ಎಂದು ಆಗಿನ ಗೃಹ ಸಚಿವರು ಪ್ರತಿಪಾದಿಸಿರುವುದಾಗಿ ಮನವಿಯಲ್ಲಿ ಹೇಳಲಾಗಿದೆ.

ಕಲಬುರ್ಗಿ ಹಾಗೂ ಪನ್ಸಾರೆ ಹತ್ಯೆಗೆ ಒಂದೇ ನಾಡ ಪಿಸ್ತೂಲನ್ನು ಬಳಸಲಾಗಿದೆ. ಸಿಬಿಐ ಹಾಗೂ ಎನ್‌ಐಎ ಅಲ್ಲದೆ ಮಹಾರಾಷ್ಟ್ರ ಪೊಲೀಸರು ಹಾಗೂ ಕರ್ನಾಟಕ ಪೊಲೀಸರ ನಡುವೆ ಹೊಂದಾಣಿಕೆ ಅಗತ್ಯ ಎಂದು ಮನವಿಯಲ್ಲಿ ಹೇಳಲಾಗಿದೆ.

 ಕಲಬುರ್ಗಿ ಹತ್ಯೆಯಾದ ನಾಲ್ಕು ದಿನಗಳ ಬಳಿಕ ನಾಲ್ವರು ಶಂಕಿತರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಮೂವರು ಹೋರಾಟಗಾರರ ಹತ್ಯೆಗಳ ನಡುವೆ ಸಾಮ್ಯತೆ ಇರುವ ಬಗ್ಗೆ ಸಾಕಷ್ಟು ಪುರಾವೆ ಸಿಕ್ಕಿದೆ ಎಂದು ಕರ್ನಾಟಕ ಸರಕಾರ ಹೇಳಿತ್ತು. ಆದರೆ, ಇದುವರೆಗೆ ತನಿಖೆಯಲ್ಲಿ ಯಾವುದೆ ಪ್ರಗತಿಯಾಗಿಲ್ಲ ಎಂದು ಉಮಾದೇವಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News