ಆಧಾರ್ ಮಾಹಿತಿಗಳ ಸೋರಿಕೆ ತಡೆಗೆ ಈಗ ‘ವರ್ಚ್ಯುವಲ್ ಐಡಿ’

Update: 2018-01-10 17:28 GMT

ಹೊಸದಿಲ್ಲಿ,ಜ.10: ಆಧಾರ್ ಮಾಹಿತಿಗಳು ಸೋರಿಕೆಯಾಗುತ್ತಿವೆ ಎಂಬ ಕಳವಳ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆಧಾರ್ ಸಂಖ್ಯೆಯ ನಿರ್ಬಂಧಿತ ಬಳಕೆಗಾಗಿ ‘ವರ್ಚ್ಯುವಲ್ ಐಡಿ(ವಿಐಡಿ)’ ಅಥವಾ ಪರೋಕ್ಷ ಗುರುತು ವ್ಯವಸ್ಥೆಯನ್ನು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ)ವು ಬುಧವಾರ ಪರಿಚಯಿಸಿದೆ. ಇದನ್ನು ಆಧಾರ್ ಸಂಖ್ಯೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ತಾತ್ಕಾಲಿಕ ಅವಧಿಗೆ ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ತನ್ನ ಗುರುತು ದೃಢೀಕರಿಸಲು ಆಧಾರ್ ಸಂಖ್ಯೆಯ ಬದಲಿಗೆ ಇದನ್ನು ಬಳಸಿಕೊಳ್ಳಬಹುದಾಗಿದೆ. ಹಲವಾರು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಆಧಾರ್ ಸಂಖ್ಯೆಗಳನ್ನು ಬಳಸಿಕೊಳ್ಳುತ್ತಿವೆ ಮತ್ತು ತಮ್ಮಲ್ಲಿಯೇ ಶೇಖರಿಸಿಟ್ಟುಕೊಳ್ಳುತ್ತಿರುವುದರಿಂದ ಹುಟ್ಟಿಕೊಂಡಿ ರುವ ಖಾಸಗಿತನದ ಭದ್ರತಾ ಕಳವಳಗಳನ್ನು ಶಮನಗೊಳಿಸುವ ಪ್ರಯತ್ನವಾಗಿ ಯುಐಡಿಎಐ ಸೀಮಿತ ಕೆವೈಸಿ(ನಿಮ್ಮ ಗ್ರಾಹಕರನು ಅರಿತುಕೊಳ್ಳಿ) ಮತ್ತು ಯುಐಡಿ ಟೋಕನ್‌ಗಳನ್ನೂ ಅಸ್ತಿತ್ವಕ್ಕೆ ತಂದಿದೆ.

ಯುಐಡಿಎಐ ಪರಿಚಯಿಸಿರುವ ವಿಐಡಿಯು ಆಧಾರ್ ಹೊಂದಿರುವವರು 12 ಅಂಕಿಗಳ ಆಧಾರ್ ಸಂಖ್ಯೆ ಬದಲು ಬಳಸಬಹುದಾದ 16 ಅಂಕಿಗಳ ಸಂಖ್ಯೆಯಾಗಿದೆ. ಇದರೊಂದಿಗೆ ವ್ಯಕ್ತಿಯು ಗುರುತು ದೃಢೀಕರಣದ ಸಂದರ್ಭದಲ್ಲಿ ತನ್ನ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ. ಇದರಿಂದಾಗಿ ವಿವಿಧ ಏಜೆನ್ಸಿಗಳು ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವ ಪರಿಪಾಠವು ಕಡಿಮೆಯಾಗಲಿದೆ ಎಂದು ಯುಐಡಿಎಐ ಸುತ್ತೋಲೆಯಲ್ಲಿ ತಿಳಿಸಿದೆ.

ವಿಐಡಿಯಿಂದ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಯಾವುದೇ ಆಧಾರ್ ಸಂಂಖ್ಯೆಯು ಯಾವುದೇ ಸಮಯದಲ್ಲಿ ಒಂದೇ ಸಕ್ರಿಯ ವಿಐಡಿಯನ್ನು ಹೊದಿರುತ್ತದೆ. ಅಂತಹ ವ್ಯಕ್ತಿಯು ಅದರ ಅವಧಿಯು ಮುಗಿದ ಬಳಿಕ ಅದನ್ನು ಹಿಂದೆಗೆದುಕೊಳ್ಳಬಹುದು ಅಥವಾ ಹೊಸದನ್ನು ಸೃಷ್ಟಿಸಬಹುದು. ಈ ಸಂಖ್ಯೆಯು ತಾತ್ಕಾಲಿಕವಾಗಿರುವುದರಿಂದ ಅದನ್ನು ‘ಡಿ-ಡುಪ್ಲಿಕೇಟ್’ ಮಾಡುವಂತಿಲ್ಲ ಮತ್ತು ಆಧಾರ್ ಹೊಂದಿರುವ ವ್ಯಕ್ತಿಯ ಪರವಾಗಿ ಏಜೆನ್ಸಿಗಳು ವಿಐಡಿಯನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ.

ಆಧಾರ್ ಹೊಂದಿರುವ ವ್ಯಕ್ತಿಯು ವಿಐಡಿಗಳನ್ನು ಸೃಷ್ಟಿಸುವ, ಅದನ್ನು ಮರಳಿ ಪಡೆಯುವ ಮತ್ತು ಬದಲಿಸಲು ಆಯ್ಕೆಗಳು ಯುಐಡಿಎಐನ ಜಾಲತಾಣ, ನೋಂದಣಿ ಕೇಂದ್ರಗಳು, ಆಧಾರ್ ಮೊಬೈಲ್ ಆ್ಯಪ್ ಇತ್ಯಾದಿಗಳಲ್ಲಿ ಲಭ್ಯವಾಗಲಿವೆ.

  ಅಲ್ಲದೆ ಗುರುತಿನ ಪುರಾವೆಯಾಗಿ ಆಧಾರ್ ಅಗತ್ಯವಾಗಿರುವ ಮತ್ತು ಅದನ್ನು ಶೇಖರಿಸುವ ಏಜೆನ್ಸಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸೀಮಿತ ಕೆವೈಸಿಯ ಪರಿಲ್ಪನೆಯನ್ನೂ ಯುಐಡಿಎಐ ಪರಿಚಯಿಸಿದೆ. ಆಧಾರ್ ದೃಢೀಕರಣ ಬಳಕೆದಾರ ಏಜೆನ್ಸಿ(ಎಯುಎ) ಗಳನ್ನು ಎರಡು ವರ್ಗಗಳಲ್ಲಿ ವಿಭಜಿಸಲಾಗುವುದು. ಈ ಪೈಕಿ ತಮ್ಮ ಸೇವೆಗಳಿಗೆ ಆಧಾರ್ ಸಂಖ್ಯೆಯನ್ನು ಶೇಖರಿಸುವುದು ಅಗತ್ಯವಿರುವ ಏಜೆನ್ಸಿಗಳನ್ನು ಗ್ಲೋಬಲ್ ಎಯುಎ ಎಂದು ಗುರುತಿಸಿ ಅವುಗಳಿಗೆ ಮಾತ್ರ ಈ ಅವಕಾಶವನ್ನು ನೀಡಲಾಗುವುದು. ಉಳಿದ ಲೋಕಲ್ ಎಯುಎಗಳಿಗೆ ಸೀಮಿತ ಕೆವೈಸಿಗೆ ಮಾತ್ರ ಅವಕಾಶ ನೀಡಲಾಗುವುದು ಮತ್ತು ಅವು ಆಧಾರ್ ಸಂಖ್ಯೆಯನ್ನು ಶೇಖರಿಸುವಂತಿಲ್ಲ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News