ಧನ್ಯಶ್ರೀ ಪ್ರಕರಣ : ಕಾಂಗ್ರೆಸ್‍ನಿಂದ ಪ್ರತಿಭಟನೆ

Update: 2018-01-11 12:21 GMT

ಮೂಡಿಗೆರೆ, ಜ.11: ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರೇ ಎಲ್ಲಿದ್ದೀರಿ? ನಿಮ್ಮ ಮತ ಕ್ಷೇತ್ರದಲ್ಲಿ ನಿಮ್ಮ ಪರಿವಾರದ ರಾಕ್ಷಸರಿಂದಲೇ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ನೀವು ನ್ಯಾಯ ಕೇಳುವುದಿಲ್ಲವೇ ಎಂದು ಎಂಎಲ್‍ಸಿ ಡಾ. ಶ್ರೀಮತಿ ಮೋಟಮ್ಮ ಪ್ರಶ್ನಿಸಿದರು.

ಅವರು ಧನ್ಯಶ್ರೀ ಪ್ರಕರಣದಲ್ಲಿ ಬುಧವಾರ ಸಂಜೆ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿ ನಂತರ ಲಯನ್ಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಹಿಂದೂಗಳ ಸಾವಿನಲ್ಲಿ ಬೇಳೆ ಬೇಯಿಸಿಕೊಳ್ಳುವ ನೀವು, ಈಗ ಯಾಕೆ ಮಾಯವಾಗಿದ್ದೀರಿ ಎಂದು ಪ್ರಶ್ನಿಸಿದ ಮೋಟಮ್ಮ, ಕೂಡಲೇ ಬಂದು ಹಿಂದೂ ಯುವತಿಯ ಸಾವಿಗೆ ಕಾರಣರಾದ ನಿಮ್ಮ ಪರಿವಾರದ ಕಿಡಿಗೇಡಿಗಳನ್ನು ಜೈಲಿಗೆ ಕಳುಹಿಸಿ. ಈ ಜಿಲ್ಲೆಯಿಂದಲೇ ಗಡಿಪಾರು ಮಾಡಿಸಿ ಎಂದು ಒತ್ತಾಯಿಸಿದರು.

ಬೇರೆ ಜಿಲ್ಲೆಗಳಲ್ಲಿ ಸಾವು ಸಂಭವಿಸಿದರೆ, ಕಿರುಚಾಡುವ ಬಿಜೆಪಿ ನಾಯಕರು ಅವರದ್ದೇ ಪಕ್ಷದ ಕಿಡಿಗೇಡಿ ಕಾರ್ಯಕರ್ತರಿಗೆ ಬುದ್ದಿ ಕಲಿಸಲಿ. ಧನ್ಯಶ್ರೀ ಸಾವಿನಲ್ಲಿ ಆಕೆ ಸಾವಿಗೆ ಕಾರಣರಾದ ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರ ಪರ ವಹಿಸಿ ಚುನಾವಣಾ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮುಸ್ಲಿಮರು ಹತ್ಯಯಾದಾಗ ಈ ನಾಯಕರು ನಾಪತ್ತೆಯಾಗುತ್ತಾರೆ. ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಧನ್ಯಶ್ರೀ ಸಾವಿಗೆ ಕಾರಣರಾದ ಹಾಗೂ ಪ್ರಕರಣದಲ್ಲಿ ಕುಮ್ಮಕ್ಕು ನೀಡಿದ ದುಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿರುವುದು ಉತ್ತಮ ಬೆಳೆವಣಿಗೆಯಾಗಿದೆ ಎಂದ ಅವರು, ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಅಟ್ಟಹಾಸ ರಾಜ್ಯಾಧ್ಯಂತ ಮಿತಿಮೀರಿದೆ. ಅಮಾಯಕರೊಂದಿಗೆ ಕಾಲು ಕೆರೆದು ಜಗಳವಾಡುವುದು, ದೊಣೆ ತಲವಾರುಗಳಿಂದ ಹಲ್ಲೆ ನಡೆಸುವುದು, ಕೊಲೆ ಮಾಡುವುದು ನಂತರ ನಾವು ದೇಶ ಪ್ರೇಮಿಗಳು ನಮಗೇನು ಗೊತ್ತೇ ಇಲ್ಲವೆಂದು ನಾಟಕವಾಡುವುದು ಈ ಸಂಘಟನೆಗಳ ಚಾಳಿಯಾಗಿದೆ ಎಂದು ದೂರಿದ ಅವರು, ಇಂತಹ ಸಂಘಟನೆಗಳ ಮುಖಂಡರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ರತಿಭಟನೆಯಲ್ಲಿ ಪಪಂ ಸದಸ್ಯರಾದ ಟಿ.ಎ.ಮದೀಶ್, ಹೆಚ್.ಪಿ.ರಮೇಶ್, ಷಣ್ಮುಖಾನಂಧ, ಮಾಜಿ ಜಿಪಂ ಸದಸ್ಯ ಎಂ.ಎಸ್.ಅನಂತ್, ಬ್ಲಾಕ್ ಕಾಂಗ್ರೆಸ್‍ನ ಹೇಮಶೇಖರ್, ಮುಖಂಡರಾದ ಅಕ್ರಮ್ ಹಾಜಿ, ಡಿ.ಎಸ್.ರಘು, ಚಿಕ್ಕಳ್ಳ ಶಂಕರ್, ಎಂ.ಎಲ್.ಅಭಿಗೌಡ, ಎಂ.ಎಸ್.ಇಬ್ರಾಹಿಂ, ಅಹಮ್ಮದ್ ಬಾವ ಬಿಳಗುಳ, ಮಜೀದ್ ಚಕಮಕ್ಕಿ, ಇರ್ಷಾದ್, ಯಾಕೂಬ್ ಗೋಣಿಗದ್ದೆ, ನದೀಮ್, ಅಜ್ಮಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News