3,500 ಕೋ.ರೂ.ಬೇನಾಮಿ ಆಸ್ತಿ ಜಪ್ತಿ ಮಾಡಿದ ಆದಾಯ ತೆರಿಗೆ ಇಲಾಖೆ

Update: 2018-01-11 16:39 GMT

ಹೊಸದಿಲ್ಲಿ,ಜ.11: ಆದಾಯ ತೆರಿಗೆ ಇಲಾಖೆಯು ಫ್ಲ್ಯಾಟ್‌ಗಳು, ಅಂಗಡಿಗಳು, ಚಿನ್ನಾಭರಣ, ಬ್ಯಾಂಕ್ ಠೇವಣಿಗಳು ಮತ್ತು ವಾಹನಗಳು ಇತ್ಯಾದಿ ಸೇರಿದಂತೆ 3,500 ಕೋ.ರೂ.ಗೂ ಅಧಿಕ ಮೌಲ್ಯದ 900 ಬೇನಾಮಿ ಆಸ್ತಿಗಳನ್ನು ವಶಪಡಿಸಿಕೊಂಡಿದೆ.

 ಗುರುವಾರ ಹೇಳಿಕೆಯೊಂದರಲ್ಲಿ ಈ ವಿಷಯವನ್ನು ತಿಳಿಸಿರುವ ಇಲಾಖೆಯು ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆಯಡಿ ಕ್ರಮಗಳನ್ನು ತಾನು ತೀವ್ರಗೊಳಿಸಿರುವುದಾಗಿ ಹೇಳಿದೆ. 2016,ನ.1ರಂದು ಜಾರಿಗೆ ಬಂದಿರುವ ಈ ಕಾಯ್ದೆಯು ಸ್ಥಿರ ಅಥವಾ ಚರ ಬೇನಾಮಿ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲು ಮತ್ತು ನಂತರ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಅಲ್ಲದೆ ಬೇನಾಮಿ ಆಸ್ತಿಯನ್ನು ತನ್ನ ಹೆಸರಿನಲ್ಲಿ ಹೊಂದಿರುವ ವ್ಯಕ್ತಿ, ಅದರ ನಿಜವಾದ ಮಾಲಕ ಮತ್ತು ಬೇನಾಮಿ ವಹಿವಾಟುಗಳಿಗೆ ಕುಮ್ಮಕ್ಕು ನೀಡಿದವರಿಗೆ ಏಳು ವರ್ಷಗಳವರೆಗೆ ಕಠಿಣ ಜೈಲುಶಿಕ್ಷೆ ಮತ್ತು ಆಸ್ತಿಯ ಮಾರುಕಟ್ಟೆ ವೌಲ್ಯದ ಶೇ.25ರಷ್ಟು ದಂಡವನ್ನು ವಿಧಿಸಬಹುದಾಗಿದೆ.

ಬೇನಾಮಿ ಆಸ್ತಿಗಳ ವಿರುದ್ಧ ಪರಿಣಾಮಕಾರಿ ಕಾರ್ಯಾಚರಣೆಗಾಗಿ ಇಲಾಖೆಯು ಮೇ 2017ರಲ್ಲಿ ದೇಶಾದ್ಯಂತ ತನ್ನ ತನಿಖಾ ನಿರ್ದೇನಾಲಯಗಳ ಅಡಿ 24 ಬೇನಾಮಿ ನಿಷೇಧ ಘಟಕ(ಬಿಪಿಯು)ಗಳನ್ನು ಸ್ಥಾಪಿಸಿದೆ.

ಇಲಾಖೆಯ ತೀವ್ರ ಪ್ರಯತ್ನಗಳಿಂದಾಗಿ 900 ಪ್ರಕರಣಗಳಲ್ಲಿ 2,900 ಕೋ.ರೂ.ಗೂ ಅಧಿಕ ವೌಲ್ಯದ ಸ್ಥಿರಾಸ್ತಿಗಳು ಸೇರಿದಂತೆ 3,500 ಕೋ.ರೂ.ಗೂ ಹೆಚ್ಚಿನ ವೌಲ್ಯದ ಬೇನಾಮಿ ಆಸ್ತಿಗಳನ್ನು ತಾತ್ಕಾಲಿಕವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News