ಈ ಕಾನೂನು ರಕ್ಷಕ ಮಾಡಿದ 'ಘನಂದಾರಿ ಕೆಲಸ' ಏನು ಗೊತ್ತೇ?

Update: 2018-01-12 03:49 GMT

ಲಕ್ನೋ, ಜ. 12: ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬ ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ಗುರುವಾರ ನಡೆದಿದೆ.

ಗೌತಮಬುದ್ಧ ನಗರದ ಮಾರಾಟ ತೆರಿಗೆ ವಿಭಾಗದಲ್ಲಿ ನಿಯೋಜಿತನಾಗಿದ್ದ ಸುಭಾಷ್ ಸಿಂಗ್ (45) ಈ ಕೃತ್ಯ ಎಸಗಿದ್ದು, ಸ್ಥಳೀಯರು ಈತನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಗ್ರೇಟರ್ ನೋಯ್ಡದ ಸೂರಜ್‌ಪುರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ಮತ್ತು ಸಂತ್ರಸ್ತೆ ಬಾಲಕಿ ಅಕ್ಕಪಕ್ಕದ ಕಟ್ಟಡದಲ್ಲಿ ವಾಸವಿದ್ದರು. ಬಾಲಕಿಯ ತಾಯಿ ಸ್ಥಳೀಯ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. "ಬಾಲಕಿಯನ್ನು ಒತ್ತಾಯಪೂರ್ವಕವಾಗಿ ತನ್ನ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದಾಗ ಬಾಲಕಿಯ ಚೀರಾಟ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿದರು. ಬಾಲಕಿಯನ್ನು ರಕ್ಷಿಸಲಾಯಿತಾದರೂ ಆತ ಓಡಿಹೋದ" ಎಂದು ಸ್ಥಳೀಯರು ವಿವರಿಸಿದ್ದಾರೆ.

ಮುಂಜಾನೆ 4ರ ವೇಳೆಗೆ ಆತ ವಾಪಸ್ಸಾದಾಗ ಮಹಿಳೆ ಆತನನ್ನು ಪತ್ತೆ ಮಾಡಿ, ಎಚ್ಚರಿಕೆ ಗಂಟೆ ಮೊಳಗಿಸಿದರು. 100ಕ್ಕೂ ಹೆಚ್ಚು ಮಂದಿ ಆತನನ್ನು ಹಿಡಿದು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

"ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ. ನೆರೆಹೊರೆಯವರು ಆರೋಪಿಯನ್ನು ಹಿಡಿದಿರುವ ಬಗ್ಗೆ ಮಾಹಿತಿ ಬಂದಿದ್ದು, ತಕ್ಷಣ ಆತನನ್ನು ವಶಕ್ಕೆ ಪಡೆಯಲಾಯಿತು" ಎಂದು ಠಾಣಾಧಿಕಾರಿ ಅಖಿಲೇಶ್ ಪ್ರಧಾನ್ ವಿವರಿಸಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News