ಬಿಜೆಪಿ ಚಿಂತನೆಗೆ ವಿರುದ್ಧವಾಗಿ ಎಫ್‌ಡಿಐ ನೀತಿ ತಿದ್ದುಪಡಿ: ಸಿನ್ಹಾ ಆಕ್ರೋಶ

Update: 2018-01-12 04:27 GMT
ಯಶವಂತ ಸಿನ್ಹಾ

ಹೊಸದಿಲ್ಲಿ, ಜ. 12: ಕೇಂದ್ರ ಸರ್ಕಾರದ ಮೇಲೆ ಮತ್ತೆ ವಾಗ್ದಾಳಿ ನಡೆಸಿರುವ ಹಿರಿಯ ಬಿಜೆಪಿ ಮುಖಂಡ ಯಶವಂತ ಸಿನ್ಹಾ, "ಕೇಂದ್ರ ಸರ್ಕಾರ ಭಾರತದ ನೇರ ವಿದೇಶಿ ಹೂಡಿಕೆ ನೀತಿಗೆ ತಂದಿರುವ ತಿದ್ದುಪಡಿ ಬಿಜೆಪಿ ಚಿಂತನೆಗೆ ವಿರುದ್ಧವಾಗಿದೆ" ಎಂದು ಕಿಡಿ ಕಾರಿದ್ದಾರೆ.

ಸಿಂಗಲ್ ಬ್ರಾಂಡ್ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇಕಡ 100ರಷ್ಟು ಹೂಡಿಕೆ ಮಾಡಲು ವಿದೇಶಿಯರಿಗೆ ಅವಕಾಶ ನೀಡಿರುವುದು ಸಣ್ಣ ವ್ಯಾಪಾರಿಗಳ ಪಾಲಿಗೆ ಮಾರಕವಾಗಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಆರ್ಥಿಕ ವಿಷಯಗಳನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಆರಂಭದಿಂದಲೂ ಸಿನ್ಹಾ ಟೀಕಿಸುತ್ತಾ ಬಂದಿದ್ದು, ನರಸಿಗಪುರ ಜಿಲ್ಲೆ ಗದರ್‌ವಾರದಲ್ಲಿ ಆರಂಭಿಸಲು ಉದ್ದೇಶಿಸಿರುವ ವಿದ್ಯುತ್ ಯೋಜನೆ ವಿರುದ್ಧ ರೈತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

"ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇಕಡ 100 ವಿದೇಶಿ ನೇರ ಹೂಡಿಕೆಗೆ ವಿರೋಧ ಪಕ್ಷವಾಗಿ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಇದು ದೇಶಕ್ಕೆ ಒಳ್ಳೆಯದಲ್ಲ. ಸಣ್ಣ ವ್ಯಾಪಾರಿಗಳು ಇದರಿಂದ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ" ಎಂದು ನುಡಿದರು.

ಮುಂದಿನ ಬಜೆಟ್ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಆಗಿದೆ. ಆದರೆ ನಾಲ್ಕು ಬಜೆಟ್‌ಗೆ ಅನುಮೋದನೆ ಸಿಕ್ಕಿದ ಬಳಿಕವೂ ದೇಶದ ಭವಿಷ್ಯವನ್ನು ಊಹಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ದೇಶದ ಆರ್ಥಿಕ ಸ್ಥಿತಿಗತಿ ಕಳವಳಕಾರಿ ಎಂದು ಸಿನ್ಹಾ ಬಣ್ಣಿಸಿದರು.

"ಕಳೆದ ನಾಲ್ಕು ವರ್ಷಗಳ ಆರ್ಥಿಕ ಸಾಧನೆಗೆ ಬಿಜೆಪಿಯವರಾದ ನಾವು ಹೊಗಳಿಕೊಳ್ಳುತ್ತಿದ್ದೇವೆ. ಬೆಲೆಯನ್ನು ಸ್ಥಿರವಾಗಿರುವಂತೆ ನೋಡಿಕೊಂಡು, ವಿತ್ತೀಯ ಕೊರತೆ ನಿಯಂತ್ರಿಸಿದರೂ ಪ್ರಗತಿ ಸಾಧಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದೇವೆ. ಇದೆಲ್ಲದರ ಹಿಂದೆ ಇರುವ ರಹಸ್ಯ ಒಂದು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅಂದರೆ 2014ರಿಂದ ತೈಲ ಬೆಲೆ ಕುಸಿದಿರುವುದು. ಬ್ಯಾರಲ್‌ಗೆ 110 ಡಾಲರ್ ಇದ್ದ ಕಚ್ಚಾತೈಲದ ಬೆಲೆ 30-35 ಡಾಲರ್‌ಗೆ ಇಳಿದಿರುವುದು ಈ ಯಶಸ್ಸಿನ ಹಿಂದಿನ ರಹಸ್ಯ" ಎಂದು ವಿಶ್ಲೇಷಿಸಿದರು.

"ತೈಲ ಬೆಲೆ ಇಳಿದಾಗ ಕೂಡಾ ಕೇಂದ್ರ ಸರ್ಕಾರ ಅದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಸರ್ಕಾರ ಇದರಿಂದ ಹಲವು ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿದೆ. ಆದರೆ ಗ್ರಾಹಕರಿಗೆ ಈ ಲಾಭ ದೊರಕಿಲ್ಲ" ಎಂದು ವಿಷಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News