ಈ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಗೊತ್ತೇ ?

Update: 2018-01-12 04:45 GMT

ಮೀರಠ್, ಜ. 12: ಬೀದಿಕಾಮಣ್ಣರ ಕಾಟಕ್ಕೆ ಮತ್ತೊಂದು ಎಳೆಜೀವ ಬಲಿಯಾಗಿದೆ. ಹಲವು ತಿಂಗಳುಗಳಿಂದ ತನ್ನನ್ನು ಹಿಂಬಾಲಿಸುತ್ತಿದ್ದ ನಾಲ್ವರು ಬೀದಿಕಾಮಣ್ಣರ ಕಿರುಕುಳ ತಡೆಯಲಾರದೇ ಹದಿನಾಲ್ಕರ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಎಂಟನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿ, ಕಾಟ ತಾಳಲಾರದೆ ಮೊದಲು ಶಾಲೆ ಬಿಟ್ಟಳು; ಬಳಿಕ ಟ್ಯೂಷನ್ ತರಗತಿಗೆ ಹೋಗುವುದನ್ನೂ ನಿಲ್ಲಿಸಿದಳು. ಅಂತಿಮವಾಗಿ ಆತ್ಮಾಹುತಿ ಮಾಡಿಕೊಂಡಳು. ಬಾಲಕಿಯ ಮೌನವನ್ನು ದುರುಪಯೋಗಪಡಿಸಿಕೊಂಡ ಈ ಕಾಮುಕರು ಇತ್ತೀಚೆಗೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆಯ ಕುಟುಂಬ ಹೇಳಿಕೊಂಡಿದೆ. ಈ ಅವಮಾನ ತಾಳಲಾರದೇ ಆಹ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ಕುಟುಂಬದವರ ಹೇಳಿಕೆ.

ಈ ಘಟನೆ ನಡೆದಿರುವುದು ಮೀರಠ್ ನಗರದಿಂದ ಕೇವಲ 15 ಕಿಲೋಮೀಟರ್ ದೂರದ ಪಂಚಗಾಂವ್ ಪಟ್ಟಿ ಗ್ರಾಮದಲ್ಲಿ. "ನೆರೆಯ ಗಾವ್ಡಿ ಗ್ರಾಮದ ನಾಲ್ಕು ಮಂದಿ, ನನ್ನ ತಂಗಿ ಶಾಲೆಗೆ ಮತ್ತು ಟ್ಯೂಷನ್ ಕ್ಲಾಸ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರತಿದಿನ ಹಿಂಬಾಲಿಸುತ್ತಿದ್ದರು. ಇದರಿಂದ ಬೇಸತ್ತ ತಂಗಿ ದಿಢೀರನೇ ಶಾಲೆ ಬಿಟ್ಟಾಗ ಏಕೆಂದು ಅರ್ಥವಾಗಲಿಲ್ಲ. ಸಂಜೆ ಟ್ಯೂಷನ್‌ಗೆ ಹೋಗುವುದೂ ನಿಲ್ಲಿಸಿದಳು. ಇದೀಗ ಈ ಮಂದಿ ನನ್ನ ಸಹೋದರಿಯನ್ನು ಸಾವಿಗೆ ಎಳೆದೊಯ್ದಿದ್ದಾರೆ" ಸಹೋದರ ದೂರು ನೀಡಿದ್ದಾರೆ.

ಜನವರಿ 6ರಂದು ಮನೆಗೆ ಬಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಳು. ಶೇಕಡ 80ರಷ್ಟು ಸುಟ್ಟ ಗಾಯಗಳಾಗಿದ್ದ ಬಾಲಕಿ ಐದು ದಿನ ಬಳಿಕ ಮೃತಪಟ್ಟಿದ್ದಾಳೆ. 

ಆರೋಪಿಗಳನ್ನು ಶೋಭಿತ್, ಮೋಹಿತ್ ಕುಮಾರ್, ಅಂಕಿತ್ ಸಿಂಗ್ ಹಾಗೂ ರವಿ ಎಂದು ಗುರುತಿಸಲಾಗಿದೆ. ಅವರು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News