ಉದುಸೆಯಲ್ಲಿ ಹುಲಿ ಭೀತಿ: ಕೂಂಬಿಂಗ್ ಕಾರ್ಯಾಚರಣೆ ಮುಕ್ತಾಯ

Update: 2018-01-13 12:30 GMT

ಮೂಡಿಗೆರೆ, ಜ.13: ಕಿರುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದುಸೆ ಎಂಬಲ್ಲಿ ಹುಲಿ ಚಲನವಲನ ಗುರುತಿಸಲು ಎರಡು ದಿನಗಳ ಕಾಲ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯನ್ನು ಶನಿವಾರ ಮುಕ್ತಾಯಗೊಳಿಸಿದರು.

ಉದುಸೆ ಗ್ರಾಮದಲ್ಲಿ ಕಳೆದ ಡಿ.2ರಂದು ಹುಲಿ ಮೂರು ಕರುಗಳನ್ನು ಕೊಂದಿತ್ತು. ನಂತರ ಡಿ.24ರಂದು ಯು.ಡಿ.ಅಣ್ಣೇಗೌಡ ಎಂಬವರ ಮೇಲೆರಗಿ ಗಾಯಗೊಳಿಸಿತ್ತು. ಇದರಿಂದ ಉದುಸೆ ಆಸುಪಾಸಿನ ನಾಗರೀಕರಲ್ಲಿ ತೀವ್ರ ಭಯ ಕಾಣಿಸಿಕೊಂಡಿತ್ತು. ಗ್ರಾಮದ ಜನವಸತಿ ಪ್ರದೇಶದೊಳಗೆ ಹುಲಿ ಬಂದಿರುವುದು ಸ್ಥಳಿಯರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿತ್ತು.

ಕಾಳು ಮೆಣಸು, ಕಾಪಿ ತೋಟಗಳಲ್ಲಿ ಕಾರ್ಮಿಕರು ಕೆಲಸ ಮಾಡಲು ಹಿಂದೇಟು ಹಾಕಿದ್ದು ಬೆಳೆಗಾರರಿಗೆ ಸಮಸ್ಯೆಯನ್ನು ತಂದೊಡ್ಡಿತ್ತು. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮಲೆನಾಡು ಭಾಗದಲ್ಲಿ ಕಾಫಿ ಕೊಯ್ಲು ಸಹಿತ ಮೆಣಸಿನ ಕೊಯ್ಲು ನಡೆಯುತ್ತಿದ್ದು, ಕಾರ್ಮಿಕರು ತೋಟದೊಳಗೆ ತೆರಳಲು ಭೀತಿ ವ್ಯಕ್ತಪಡಿಸಿ ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಡ ಹೆಚ್ಚಿತ್ತು.

ಕೆಲವು ದಿನಗಳ ಹಿಂದೆ ಉದುಸೆ ಗ್ರಾಮಕ್ಕೆ ಬೆಂಗಳೂರಿನಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಕೂಂಬಿಂಗ್ ಕಾರ್ಯಾಚರಣೆ ನಡೆಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಕ್ರೆಬೈಲು ಸಾಕು ಆನೆಗಳ ಶಿಬಿರದಿಂದ ಎರಡು ಆನೆಗಳನ್ನು ಕರೆ ತಂದು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಮತ್ತು ಶನಿವಾರ ಎಡರು ದಿನ ಗ್ರಾಮದ ಸುತ್ತಮುತ್ತಲ ತೋಟಗಳು ಮತ್ತು ಕಾಡುಗಳಲ್ಲಿ ಸಂಚರಿಸಿ ಕೂಂಬಿಗ್ ಕಾರ್ಯಾಚರಣೆ ನಡೆಸಿದರು.

ಆದರೆ ತಗ್ಗು, ಎತ್ತರ, ಕಾಡು, ತೋಟಗಳ ಪ್ರದೇಶದಲ್ಲಿ ಎಲ್ಲೂ ಹುಲಿ ಹಾಗೂ ಹುಲಿ ಸಂಚರಿಸಿದ ಕುರುಹು ಗೋಚರಿಸಿಲ್ಲ. ಸ್ಥಳೀಯರಿಗೆ ಗ್ರಾಮದೊಳಗೆ ಹುಲಿ ಇರುವ ಭೀತಿ ಇತ್ತು. ಈ ಹಿನ್ನೆಲೆಯಲ್ಲಿ ಜನರ ಭೀತಿಯನ್ನು ತೊಡೆದುಹಾಕಲು ಅರಣ್ಯ ಇಲಾಖೆ ಹುಲಿಯ ಚಲನವಲನ ಗುರುತಿಸಲು ಟ್ರ್ಯಾಪಿಂಗ್ ಕ್ಯಾಮೆರ ಇಟ್ಟು ಗಮನಿಸಿದಾಗ ಮೊದಲ ದಿನ ಹುಲಿ ಇರುವುದು ಪತ್ತೆಯಾಗಿತ್ತು. 

ಹುಲಿ ಇರುವುದು ಕಂಡು ಬಂದಿದ್ದರಿಂದ ಅದನ್ನು ಹಿಡಿಯಲು ಬಿಬೋನು ಇಟ್ಟಿದೆವು. ಆದರೆ ಬೋನು ಬಳಿ ಹುಲಿ ಬಂದಿಲ್ಲ. ಅನಂತರ ಆಸುಪಾಸಿನಲ್ಲಿ ಎಲ್ಲೂ ಹುಲಿ ಕಾಣಿಸಿಕೊಂಡಿಲ್ಲ. ಹುಲಿಯನ್ನು ಎತ್ತರದಿಂದ ಗಮನಿಸಲು ಸಾಕಿದ ಆನೆಗಳನ್ನು ತರಿಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದೇವೆ. ಸುಮಾರು 50 ಸಿಬ್ಬಂಧಿಗಳ ಸಹಿತ ಅರೆವಳಿಕೆ ವೈಧ್ಯರನ್ನು ಕೂಡ ಜತೆಯಲ್ಲಿ ಕರೆದೊಯ್ಯಲಾಗಿತ್ತು. ಸ್ಥಳೀಯರು ಸಹಕರಿಸಿದ್ದಾರೆ. ಇಲ್ಲಿ ಎಲ್ಲೂ ಹುಲಿ ಇಲ್ಲ. ಜನರು ಭಯಪಡುವ ಅಗತ್ಯವಿಲ್ಲ ಎಂದು ಎಸಿಫ್ ಮುದ್ದಣ್ಣ ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರಿಗೆ ತಿಳಿಸಿದರು.

ಈ ಸಮಯದಲ್ಲಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ, ಸ್ಥಳೀಯ ಮುಖಂಡರಾದ ಯು.ಎನ್.ಚಂದ್ರೇಗೌಡ, ಕಿರುಗುಂದ ಗ್ರಾಪಂ ಸದಸ್ಯ ರಾಜಶೇಖರ್, ಗ್ರಾಮಸ್ಥರಾದ ಚಂದ್ರಶೇಖರ್, ಸಚಿನ್, ಆರ್‍ಎಫ್‍ಓ ಪ್ರಹ್ಲಾದ್, ಸಿಂಧಿಗಳಾದ ಶಿವಕುಮಾರ್, ಪರಮೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News