ಹಿಂದೂ ಸಂಸ್ಕೃತಿ ಒಪ್ಪಿಕೊಳ್ಳುವ ಮುಸ್ಲಿಮರು ಮಾತ್ರ ಭಾರತದಲ್ಲಿ ಉಳಿಯುತ್ತಾರೆ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

Update: 2018-01-14 13:17 GMT

ಹೊಸದಿಲ್ಲಿ,ಜ.14: ಭಾರತವು ‘ಹಿಂದೂ ರಾಷ್ಟ್ರ’ವಾದ ಬಳಿಕ ಹಿಂದು ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಮುಸ್ಲಿಮರು ಮಾತ್ರ ಭಾರತದಲ್ಲಿ ಉಳಿಯುತ್ತಾರೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬೈರಿಯಾದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೆಲವೇ ಮುಸ್ಲಿಮರು ದೇಶಭಕ್ತರಾಗಿದ್ದಾರೆ. ಭಾರತವು ಹಿಂದೂ ರಾಷ್ಟ್ರವಾದ ಬಳಿಕ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಮುಸ್ಲಿಮರು ಮಾತ್ರ ಈ ದೇಶದಲ್ಲಿರುತ್ತಾರೆ. ಒಪ್ಪದವರು ಇತರ ಯಾವುದೇ ರಾಷ್ಟ್ರದಲ್ಲಿ ಆಶ್ರಯ ಪಡೆದುಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದರು.

 ಪ್ರಧಾನಿ ನರೇಂದ್ರ ಮೋದಿಯವರನ್ನು ‘ಅವತಾರ ಪುರುಷ’ ಎಂದು ಬಣ್ಣಿಸಿದ ಸಿಂಗ್, ಆರೆಸ್ಸೆಸ್ 2025ರಲ್ಲಿ ನೂರು ವರ್ಷಗಳನ್ನು ಪೂರೈಸುತ್ತಿದ್ದು, 2024ರಲ್ಲಿ ಭಾರತವು ಹಿಂದು ರಾಷ್ಟ್ರವಾಗಲಿದೆ. ದೇವರ ದಯೆಯಿಂದ ಭಾರತವು ಜಾಗತಿಕ ‘ಸೂಪರ್ ಪವರ್’ ಆಗಲಿದೆ. ಇದರ ಹೆಗ್ಗಳಿಕೆ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಲ್ಲಬೇಕು. ಭಾರತವು ‘ವಿಶ್ವಗುರು’ ಆಗುವುದು ಮಾತ್ರವಲ್ಲ, 2024ರ ವೇಳೆಗೆ ಅದು ಹಿಂದು ರಾಷ್ಟ್ರವೂ ಆಗಲಿದೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೂ ಟೀಕಿಸಿದ ಸಿಂಗ್, ಭಾರತೀಯ ಮತ್ತು ಇಟಾಲಿಯನ್ ಸಂಕೇತಗಳ ಮಿಶ್ರಣವಾಗಿರುವ ಅವರೆಂದೂ ಭಾರತದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News