ತಾಯಿಗೆ ಸಹಾಯ ಮಾಡಲು ರೋಬೊಟ್ ನಿರ್ಮಿಸಿದ 9 ವರ್ಷದ ಬಾಲಕ !

Update: 2018-01-14 17:27 GMT

ತಿರುವನಂತಪುರ, ಜ.14: ಮನೆಯಲ್ಲಿ ತಾಯಿಗೆ ಪೊರಕೆ ಹಿಡಿದು ಕಸಗುಡಿಸಲು ಕಷ್ಟವಾಗುತ್ತಿರುವುದನ್ನು ಗಮನಿಸಿದ ಕೇರಳದ ಬಾಲಕನೋರ್ವ ನೆಲ ಗುಡಿಸಲು ರೋಬೊಟ್(ಯಂತ್ರಮಾನವ) ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾನೆ. ಈತನ ಈ ಸಾಧನೆಯಿಂದ ಅಮೆರಿಕದಲ್ಲಿ ನಡೆಯುವ ‘ಮೇಕರ್ ಫೇರ್’ ಉತ್ಸವದಲ್ಲಿ ಪಾಲ್ಗೊಳ್ಳಲು ಈತನಿಗೆ ಅವಕಾಶ ಒದಗಿಬಂದಿದೆ.

ಸಾರಂಗ್ ಈಗಾಗಲೇ ದೇಶವಿದೇಶದಲ್ಲಿ ಉಪನ್ಯಾಸ ಕಾರ್ಯಕ್ರಮ ಹಾಗೂ ತಾನು ರೂಪಿಸಿದ ಸಾಧನಗಳ ಕುರಿತು ಪ್ರಾತ್ಯಕ್ಷಿಕೆ ನೀಡುತ್ತಿದ್ದಾನೆ. ಕಳೆದ ವರ್ಷ ಚೀನಾದಲ್ಲಿ ನಡೆದ ‘ಫ್ಯಾಬ್ 12 ’ ಸಮ್ಮೇಳನದಲ್ಲಿ ಉಪನ್ಯಾಸ ನೀಡಿರುವ ಸಾರಂಗ್, ಇದೀಗ ಎರಡನೇ ಬಾರಿಗೆ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ನಡೆಯುವ ಸಂಶೋಧನೆ, ಸೃಜನಶೀಲತೆ ಹಾಗೂ ಸಂಪನ್ಮೂಲತೆಯ ಕಾರ್ಯಕ್ರಮಗಳನ್ನು ಹೊಂದಿರುವ ‘ಮೇಕರ್ ಫೇರ್’ ಉತ್ಸವದಲ್ಲಿ ಭಾಗವಹಿಸಲಿದ್ದಾನೆ. ಅಂಧರಿಗೆ ಉಪಯೋಗವಾಗುವ ವಾಕಿಂಗ್ ಸ್ಟಿಕ್, ರೋಬೊಟ್ ಸಹಾಯದಿಂದ ಚಲಿಸುವ ತ್ರಿಚಕ್ರದ ಸೈಕಲ್, ವಿಶೇಷ ಡಿಜಿಟಲ್ ಗಡಿಯಾರ -ಇವು ಸಾರಂಗ್ ನಿರ್ಮಿಸಿರುವ ಸಾಧನಗಳಲ್ಲಿ ಸೇರಿವೆ.

ತನಗೆ ತಂದೆಯೇ ಆದರ್ಶವ್ಯಕ್ತಿ ಎನ್ನುವ ಸಾರಂಗ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಯಾವಾಗಲೂ ಹೇಳುತ್ತಿದ್ದ- ಯುವಜನತೆ ದೊಡ್ಡ ಕನಸು ಕಾಣಬೇಕು ಎಂಬ ನುಡಿಯಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿದ್ದಾನೆ. ಕೊಚ್ಚಿ ನಿವಾಸಿಯಾಗಿರುವ 9 ವರ್ಷದ ಬಾಲಕ ಸಾರಂಗ್ ಸುಮೇಶ್‌ಗೆ ಆಟಕ್ಕಿಂತಲೂ ಯಂತ್ರೋಪಕರಣಗಳ ಬಗ್ಗೆ ಹೆಚ್ಚಿನ ಆಸಕ್ತಿಯಿತ್ತು. ಇದನ್ನು ಮನಗಂಡು ಆತನಿಗೆ ಕೆಲವೊಂದು ಉಪಕರಣ ಹಾಗೂ ಕಚ್ಛಾವಸ್ತುಗಳನ್ನು ಒದಗಿಸಿದ್ದೆ. ಸಣ್ಣ ಮಗುವಾಗಿದ್ದಾಗ ಆತನಿಗೆ ಆಟಿಕೆ ನೀಡಿದರೆ ತಕ್ಷಣ ಅದನ್ನು ಬಿಚ್ಚಿ ಒಳಗಿದ್ದ ಯಂತ್ರಗಳನ್ನು ಹೊರಗೆ ತೆಗೆದು ಮತ್ತೆ ಮೊದಲಿನಂತೆಯೇ ಜೋಡಿಸುತ್ತಿದ್ದ. ನಾಲ್ಕರ ಹರೆಯದಲ್ಲೇ ಮಗ ಯಂತ್ರಗಳ ಬಗ್ಗೆ ಆಸಕ್ತಿ ಬೆಳೆಸಿರುವುದು ಗಮನಕ್ಕೆ ಬಂದಿದೆ ಎಂದು ಬಾಲಕನ ತಂದೆ, ಪ್ರಸ್ತುತ ಅಮೆರಿಕದಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿ.ಎಸ್.ಸುಮೇಶ್ ಹೇಳಿದ್ದಾರೆ.

ಕೊಚ್ಚಿಯಲ್ಲಿರುವ ವಯೋವೃದ್ಧ ತಾಯಿತಂದೆಯರನ್ನು ನೋಡಿಕೊಳ್ಳಲು ಸುಮೇಶ್ ಅವರ ಪತ್ನಿ, ಶ್ರೀಜಯ ಮಗನೊಂದಿಗೆ ಕೊಚ್ಚಿಗೆ ವಾಪಸಾದರು. ಚಾಯ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುವ ಸಾರಂಗ್‌ಗೆ ವಿಜ್ಞಾನದ ಬಗ್ಗೆ ಆಸಕ್ತಿ. ಆದರೆ ಗಣಿತ ಎಂದರೆ ಅಚ್ಚುಮೆಚ್ಚು ಎನ್ನುತ್ತಾನೆ. ಈತನ ವೈಜ್ಞಾನಿಕ ಆಸಕ್ತಿಯ ಕಾರಣ ಕೆಲವೊಮ್ಮೆ ಶಾಲೆಯ ಅಭ್ಯಾಸಕ್ಕೆ ಅಡ್ಡಿಯಾಗಿದ್ದರೂ ಶಾಲೆಯ ಆಡಳಿತವರ್ಗ ಹಾಗೂ ಶಿಕ್ಷಕರು ಬಾಲಕನ ಪ್ರತಿಭೆ ಹೊರಹೊಮ್ಮಲು ಅವಕಾಶ ಒದಗಿಸಿದ್ದಾರೆ.

ಹಲವಾರು ಸಂಶೋಧನೆ: ಸ್ಮಾರ್ಟ್ ಸೀಟ್ ಬೆಲ್ಟ್, ನೆಲ ಒರೆಸುವ ರೋಬೊಟ್, ನಿರುಪಯೋಗಿ ಬಾವಿಗಳ ಒಳಗೆ ಇರುವ ವಿಷಾನಿಲ ಪರೀಕ್ಷಿಸುವ ಗ್ಯಾಸ್ ಸೆನ್ಸರ್, ಅಂಧರಿಗೆ ಉಪಯೋಗವಾಗುವ ವಿಶೇಷ ವಾಕಿಂಗ್ ಸ್ಟಿಕ್, ವಿಶೇಷ ಡಿಜಿಟಲ್ ಗಡಿಯಾರ, ಕ್ಯಾಲ್ಕುಲೇಟರ್- ಇವು ಈ ಬಾಲಕ ತಯಾರಿಸಿದ ಸಾಧನಗಳು. ಇದೀಗ ಕಸಗುಡಿಸುವ ರೋಬೊಟ್‌ನ ಸಾಮರ್ಥ್ಯ ಹೆಚ್ಚಿಸಿ ಇನ್ನಷ್ಟು ಕಾರ್ಯಗಳನ್ನು ಮಾಡುವಂತೆ ರೂಪಿಸಲು ನಿರ್ಧರಿಸಿದ್ದಾನೆ. ದೇಶವು ಸ್ವಚ್ಛವಾಗಿರಬೇಕು ಎಂಬುದು ನನ್ನ ಹಂಬಲ. ನಾವು ಕ್ಷೇತ್ರದಲ್ಲೂ ಇತರ ದೇಶಗಳಿಗಿಂತ ಹಿಂದುಳಿದಿಲ್ಲ ಎಂದು ವಿಶ್ವಕ್ಕೆ ತೋರಿಸುವ ಸಮಯ ಇದೀಗ ಕೂಡಿಬಂದಿದೆ ಎಂದು ಬಾಲಕ ಸಾರಂಗ್ ಹೇಳುತ್ತಾನೆ.

ಬಾಲಕನ ಸಾಧನೆಗೆ ಈಗಾಗಲೇ ಹಲವಾರು ಪುರಸ್ಕಾರಗಳು ಸಂದಿವೆ. ಕಳೆದ ವರ್ಷ ಕೇರಳ ಸರಕಾರ ಈತನಿಗೆ ‘ಯುವ ಪ್ರತಿಭೆ’ ಪುರಸ್ಕಾರ ನೀಡಿ ಗೌರವಿಸಿದೆ. ರೊಬೊಟ್ ತಯಾರಿಸಿದ ಅತ್ಯಂತ ಚಿಕ್ಕ ಬಾಲಕ ಸಾರಂಗ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾನೆ. ಮುಂದಿನ ಸಾಲಿನ ‘ಫ್ಯಾಬ್ ಲ್ಯಾಬ್’ ಕೋರ್ಸ್‌ಗೆ ಈತನನ್ನು ಸೇರ್ಪಡೆಗೊಳಿಸಲು ನಾವು ನಿರ್ಧರಿಸಿದ್ದೇವೆ . ಬಾಲಕನ ವೈಜ್ಞಾನಿಕ ಆಸಕ್ತಿಗೆ ಪೂರಕವಾಗುವ ಎಲ್ಲಾ ನೆರವನ್ನೂ ಸರಕಾರ ನೀಡಲಿದೆ ಎಂದು ‘ಕೇರಳ ಸ್ಟಾರ್ಟ್ ಅಪ್ ಮಿಷನ್’ನ ಸಿಇಒ ಸಾಜಿ ಗೋಪಿನಾಥ್ ತಿಳಿಸಿದ್ದಾರೆ. (ಪ್ಯಾಬ್ ಲ್ಯಾಬ್ ಕೋರ್ಸ್‌ಗೆ ಸಾಮಾನ್ಯವಾಗಿ ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವೀಧರರು ಸೇರ್ಪಡೆಗೊಳ್ಳುತ್ತಾರೆ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News