ಗುಜರಾತ್‌ನಲ್ಲೂ ‘ಪದ್ಮಾವತ್‌’ಗೆ ನಿಷೇಧ

Update: 2018-01-15 21:31 IST
ಗುಜರಾತ್‌ನಲ್ಲೂ ‘ಪದ್ಮಾವತ್‌’ಗೆ ನಿಷೇಧ
  • whatsapp icon

 ಅಹ್ಮದಾಬಾದ್,ಜ.15: ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ ಪದ್ಮಾವತ್‌ನ ಪ್ರದರ್ಶನಕ್ಕೆ ರಾಜಸ್ಥಾನದ ಬಳಿಕ ಗುಜರಾತ್‌ನಲ್ಲೂ ನಿಷೇಧ ಹೇರಲಾಗಿದೆ. ಪದ್ಮಾವತ್ ಚಿತ್ರ ನಿಷೇಧಿಸಿ ಗುಜರಾತ್ ಸರಕಾರ ಶುಕ್ರವಾರ ಅಧಿಸೂಚನೆಯೊಂದನ್ನು ಹೊರಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಅದು ಸ್ಪಷ್ಟಪಡಿಸಿದೆ.

 ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ ಬಳಿಕ ಗುಜರಾತ್,ಪದ್ಮಾವತ್ ಚಿತ್ರಕ್ಕೆ ನಿಷೇಧ ಹೇರಲ್ಪಟ್ಟ ನಾಲ್ಕನೆ ರಾಜ್ಯವಾಗಲಿದೆ. ಗುಜರಾತ್‌ನಲ್ಲಿ ಕಳೆದ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಸರಕಾರವು, ಈ ಮೊದಲು ಪದ್ಮಾವತಿ ಎಂದು ಹೆಸರಿಡಲಾಗಿದ್ದ, ಈ ಚಿತ್ರವನ್ನು ನಿಷೇಧಿಸಿತ್ತು.

 2004ರ ಗುಜರಾತ್ ಸಿನೆಮಾಗಳ (ನಿಯಂತ್ರಣ) ಕಾಯ್ದೆ ನಿಯಮಾವಳಿಗಳಡಿ ಪದ್ಮಾವತ್ ಚಿತ್ರದ ಪ್ರದರ್ಶನವನ್ನು ನಿಷೇಧಿಸಿರುವುದಾಗಿ ರಾಜ್ಯದ ಸಹಾಯಕ ಗೃಹ ಸಚಿವ ಇಂದು ಹೊರಡಿಸಿದ ಅಧಿಸೂಚನೆಯು ತಿಳಿಸಿದೆ.

ಹೆಸರು ಬದಲಾವಣೆಯ ಹೊರತಾಗಿಯೂ ಚಿತ್ರದ ಮೇಲಿನ ನಿಷೇಧವನ್ನು ಮುಂದುವರಿಸಲಾಗುವುದೆಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಘೋಷಿಸಿದ ಕೆಲವೇ ದಿನಗಳ ಬಳಿಕ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News