ವಿಎಚ್ ಪಿ ನಾಯಕ ಪ್ರವೀಣ್ ತೊಗಾಡಿಯಾ ನಾಪತ್ತೆ!

Update: 2018-01-15 16:36 GMT

ಅಹ್ಮದಾಬಾದ್ , ಜ.15: ಸೋಮವಾರ ಬೆಳಗ್ಗಿನಿಂದ  ಪ್ರವೀಣ್ ತೊಗಾಡಿಯಾ ನಾಪತ್ತೆಯಾಗಿದ್ದಾರೆ ಎಂದಿರುವ ವಿಶ್ವ ಹಿಂದೂ ಪರಿಷತ್ ರಾಜಸ್ಥಾನ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದೆ. ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಪೊಲೀಸರು ತೊಗಾಡಿಯಾ ನಮ್ಮ ಕಸ್ಟಡಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ರಾಜಸ್ಥಾನ ಪೊಲೀಸರು ತೊಗಾಡಿಯಾರನ್ನು ಬಂಧಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

ತೊಗಾಡಿಯಾ ವಿರುದ್ಧದ ಬಂಧನ ವಾರಂಟ್ ನೊಂದಿಗೆ ಪೊಲೀಸ್ ಅಧಿಕಾರಿಗಳ ತಂಡವೊಂದು ತೆರಳಿತ್ತು. ಆದರೆ ಮನೆಯಲ್ಲಿ ಅವರು ಇರಲಿಲ್ಲ ಎಂದು ಸ್ಥಳೀಯ ಸೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ನಾವು ಅವರ ಪತ್ತೆಗಾಗಿ ಶ್ರಮಿಸುತ್ತಿದ್ದೇವೆ. 10:45ರ ಸುಮಾರಿಗೆ ಅವರು ವಿಎಚ್ ಪಿ ಕಚೇರಿಯಿಂದ ಹೊರ ತೆರಳಿದ್ದರು” ಎಂದು ಪೊಲೀಸ್ ಅಧಿಕಾರಿ ಜೆ.ಕೆ.ಭಟ್ ಮಾಹಿತಿ ನೀಡಿದ್ದಾರೆ.

ಝಡ್ ಪ್ಲಸ್ ಸೆಕ್ಯುರಿಟಿಯಿದ್ದರೂ ಸೋಮವಾರ ಹೊರಗೆ ತೆರಳಿದಾಗ ಅವರ ಜೊತೆ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದವರು ಹೇಳಿದ್ದಾರೆ.

ತೊಗಾಡಿಯಾರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದ ಸುಮಾರು 40 ವಿಎಚ್ ಪಿ ಕಾರ್ಯಕರ್ತರು ಸೋಲಾ ಪಟ್ಟಣದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ, ರಸ್ತೆಯನ್ನು ತಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News