ನನ್ನನ್ನು ಎನ್‌ಕೌಂಟರ್ ಮೂಲಕ ಕೊಲ್ಲಲು ಯತ್ನಿಸಲಾಗುತ್ತಿದೆ: ತೊಗಾಡಿಯಾ ಆರೋಪ

Update: 2018-01-16 16:25 GMT

ಹೊಸದಿಲ್ಲಿ,ಜ.16: ದಶಕದಷ್ಟು ಹಳೆಯ ಪ್ರಕರಣವೊಂದರಲ್ಲಿ ತನ್ನ ಬಂಧನವನ್ನು ತಪ್ಪಿಸಿಕೊಳ್ಳಲು ಸೋಮವಾರ ‘ನಾಪತ್ತೆ’ಯಾಗಿದ್ದ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಮಂಗಳವಾರ ಅಹ್ಮದಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತ್ಯಕ್ಷರಾಗಿ ಮಾತನಾಡಿದರು. ತನ್ನನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗುತ್ತದೆ ಎಂಬ ಮಾಹಿತಿಯು ಲಭಿಸಿದೆ ಎಂದರು.

ಸಲೈನ್ ಬಾಟ್ಲಿಯನ್ನು ಹಿಡಿದುಕೊಂಡಿದ್ದ ಸಹಾಯಕನ ಜೊತೆ ಸುದ್ದಿಗಾರರ ಎದುರು ಕಾಣಿಸಿಕೊಂಡ ತೊಗಾಡಿಯಾ, ಸೋಮವಾರ ಬೆಳಗ್ಗೆ ತಾನು ಪೂಜೆ ಮಾಡುತ್ತಿದ್ದಾಗ ಕಚೇರಿಯನ್ನು ಪ್ರವೇಶಿಸಿದ್ದ ವ್ಯಕ್ತಿಯೋರ್ವ ತನ್ನನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗುತ್ತದೆ ಎಂದು ತಿಳಿಸಿದ್ದ ಎಂದು ಹೇಳಿದರು.

ರಾಜಸ್ಥಾನ ಪೊಲೀಸರು ಗುಜರಾತಿಗೆ ಬಂದಿದ್ದಾರೆ ಎಂದು ಗೊತ್ತಾದ ಬಳಿಕ ತನ್ನ ಬಂಧನವು ಅರಾಜಕತೆಗೆ ಕಾರಣವಾಗುತ್ತದೆ ಎಂಬ ಚಿಂತೆಯಿಂದ ಕಚೇರಿಯಿಂದ ಹೊರಬಿದ್ದಿದ್ದೆ. ತನ್ನ ಇರುವಿಕೆ ಪತ್ತೆಯಾಗದಿರಲು ಮೊಬೈಲ್ ಫೋನ್‌ನ್ನು ಸ್ವಿಚ್ ಆಫ್ ಮಾಡಿದ್ದೆ ಮತ್ತು ಥಲ್ತೇಜ್‌ನಲ್ಲಿರುವ ವಿಹಿಂಪ ಕಾರ್ಯಕರ್ತ ನೋರ್ವನ ಕಚೇರಿಗೆ ತೆರಳಿದ್ದೆ ಎಂದರು.

ತನ್ನ ಧ್ವನಿಯನ್ನಡಗಿಸಲು ತನ್ನ ವಿರುದ್ಧ ಪ್ರಕರಣಗಳನ್ನು ಹೊರಿಸಲಾಗುತ್ತಿದೆ ಎಂದು ಆರೋಪಿಸಿದ ತೊಗಾಡಿಯಾ ಸುದ್ದಿಗೋಷ್ಠಿಯ ನಡುವೆ ಸೋಮವಾರದ ಘಟನಾವಳಿಗಳನ್ನು ವಿವರಿಸುತ್ತಿದ್ದಾಗ ಭಾವೋದ್ವೇಗಕ್ಕೊಳಗಾಗಿ ಕಣ್ಣೀರನ್ನು ಹಾಕಿದರು. ತಾನು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕೋತರ್‌ಪುರದ ಬಳಿ ಪ್ರಜ್ಞಾಶೂನ್ಯನಾಗಿದ್ದೆ ಎಂದರು.

ಗುಜರಾತ್ ಮತ್ತು ರಾಜಸ್ಥಾನಗಳಲ್ಲಿಯ ತನ್ನೆಲ್ಲ ವಕೀಲರನ್ನು ಸಂಪರ್ಕಿಸಿದ್ದು, ನ್ಯಾಯಾಲಯದ ಎದುರು ಶರಣಾಗುವಂತೆ ಅವರು ಸಲಹೆ ನೀಡಿದ್ದರು. ಹೀಗಾಗಿ ಜೈಪುರವನ್ನು ತಲುಪಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕೋತರ್‌ಪುರದ ಬಳಿ ಪ್ರಜ್ಞಾಶೂನ್ಯನಾಗಿದ್ದು, ಬೇರೇನೂ ತನಗೆ ನೆನಪಿಲ್ಲ. ತಾನು ಒಂಟಿಯಾಗಿದ್ದು, ಪೊಲೀಸರಿಗೆ ಗೊತ್ತಾಗದಿರಲು ಶಾಲಿನಿಂದ ಮರೆ ಮಾಡಿಕೊಂಡಿದ್ದೆ ಎಂದು ತೊಗಾಡಿಯಾ ತಿಳಿಸಿದರು.

ತಾನು ಯಾವುದೇ ತಪ್ಪನ್ನು ಮಾಡಿಲ್ಲವಾದ್ದರಿಂದ ರಾಜಕೀಯ ಒತ್ತಡಕ್ಕೆ ಬಲಿಯಾಗದಂತೆ ಅವರು ಗುಜರಾತ್ ಕ್ರೈಂ ಬ್ರಾಂಚ್‌ನ್ನು ಕೋರಿಕೊಂಡರು.

ತಾನು ಪರಾರಿಯಾಗುತ್ತಿಲ್ಲ. ಗುಜರಾತ್ ಅಥವಾ ರಾಜಸ್ಥಾನ ಪೊಲೀಸರ ವಿರುದ್ಧ ತನಗೆ ಯಾವುದೇ ದೂರುಗಳಿಲ್ಲ. ತನ್ನ ಕೋಣೆಯನ್ನು ಶೋಧಿಸಲು ಮುಂದಾಗಿರುವುದೇಕೆ ಎಂದಷ್ಟೇ ಗುಜರಾತ್ ಪೊಲೀಸರನ್ನು ಪ್ರಶ್ನಿಸಲು ಬಯಸುತ್ತೇನೆ. ತಾನು ಕ್ರಿಮಿನಲ್ ಅಲ್ಲ. ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ನುಡಿದರು.

ಸೋಮವಾರ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದ ಕೋತರ್‌ಪುರದ ಬಳಿ ನಿಗೂಢ ಸ್ಥಿತಿಯಲ್ಲಿ ತೊಗಾಡಿಯಾ ಪತ್ತೆಯಾಗಿದ್ದರು. ‘ಅರೆ ಪ್ರಜ್ಞಾವಸ್ಥೆ ’ಯಲ್ಲಿದ್ದ ಅವರನ್ನು ಶಾಹಿಬಾಗ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಹೈಪೊಗ್ಲೈಸಿಮಿಯಾ ಅಥವಾ ರಕ್ತದಲ್ಲಿ ಗ್ಲುಕೋಸ್ ಮಟ್ಟ ಕುಸಿದಿದ್ದು ಅವರು ಪ್ರಜ್ಞೆ ಕಳೆದುಕೊಳ್ಳಲು ಕಾರಣವಾಗಿತ್ತು ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದರು.

ಸೋಮವಾರ ತೊಗಡಿಯಾ ಬಂಧನದ ವರದಿಗಳ ಬಳಿಕ ರಾಜ್ಯದ ವಿವಿಧೆಡೆ ಹಲವಾರು ವಿಹಿಂಪ ಕಾರ್ಯಕರ್ತರು ಬೀದಿಗಿಳಿದಿದ್ದರು ಮತ್ತು ತೊಗಾಡಿಯಾ ‘ನಾಪತ್ತೆ’ಯಾಗಿದ್ದಾರೆ ಎಂದು ಗುಜರಾತ್ ಪೊಲೀಸರು ಹೇಳಿಕೆ ನೀಡಿದ ಬಳಿಕವೂ ತಮ್ಮ ಧರಣಿಗಳನ್ನು ಮುಂದುವರಿಸಿದ್ದರು. ವಾಹನಗಳ ಸಂಚಾರಕ್ಕೆ ತಡೆಯೊಡ್ಡಲು ಮುಂದಾಗಿದ್ದ ಡಝನ್‌ಗಟ್ಟಲೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News