ತುಮಕೂರು: ವೈ.ಹೆಚ್.ಹುಚ್ಚಯ್ಯರ ಬಂಧನಕ್ಕೆ ಆಗ್ರಹ

Update: 2018-01-16 13:42 GMT

ತುಮಕೂರು, ಜ.16: ಕೆ.ಪಿ.ಸಿ.ಸಿ.ಅಧ್ಕಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಕೊರಟಗೆರೆ ಕ್ಷೇತ್ರದ ಬಿಜೆಪಿ ಶಾಸಕ ಅಬ್ಯರ್ಥಿ ಎಂದು ಗುರುತಿಸಿಕೊಂಡಿರುವ ವೈ.ಹೆಚ್.ಹುಚ್ಚಯ್ಯ ಲೋಫರ್‍ನನ್ ಮಗ ಎಂದು ಸಂಬೋಧಿಸಿರುವುದನ್ನು ಖಂಡಿಸಿ,ಅವರನ್ನು ಬಂಧಿಸಿಸಬೇಕೆಂದು ಆಗ್ರಹಿಸಿ ಬುಧವಾರ ಕೋರ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಂಗಳವಾರ ಮಧ್ಯಾಹ್ನ 1:30ರ ಸುಮಾರಿಗೆ ಕೊರಟಗೆರೆ ಕ್ಷೇತ್ರದ ಸೋಂದೇನಹಳ್ಳಿ ಗ್ರಾ.ಪಂ.ಗೆ ಸೇರಿದ ಹರಿಯಪ್ಪನಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಮುಖಂಡ ವೈ.ಹೆಚ್.ಹುಚ್ಚಯ್ಯ,ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾಗದಿರಲು ಡಾ.ಜಿ.ಪರಮೇಶ್ವರ್ ಕಾರಣ. ಅವರ ಅಡ್ಡಗಾಲು ಹಾಕಿದ್ದಾರೆ. ಅಂತಹವರಿಗೆ ಮತ ನೀಡಬೇಡಿ ಎಂದು ಹೇಳುತ್ತಿದ್ದರು. ಈ ವೇಳೆ ಗ್ರಾ.ಪಂ.ಸದಸ್ಯ ರಾಜು ಎಂಬುವವರು ವೈ.ಹೆಚ್.ಹುಚ್ಚಯ್ಯ ಅವರನ್ನು ಪ್ರಶ್ನಿಸಿದ್ದಾರೆ. ನೀವು ಸುಳ್ಳು ಹೇಳಿ, ಅಪಪ್ರಚಾರ ಮಾಡುತ್ತಿದ್ದೀರ, ಇದಕ್ಕೆ ದಾಖಲೆ ಇದ್ದರೆ ನೀಡಿ ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ವೈ.ಹೆಚ್.ಹುಚ್ಚಯ್ಯ, ಪರಮೇಶ್ವರ್ ಒಬ್ಬ ಲೋಫರ್ ನನ್ ಮಗ, ಆತನ ಬಗ್ಗೆ ಕೇಳಲು ಬಂದಿದ್ದೀಯ ಎಂದು ಕೇಳಿದ್ದಾರೆ. ಇದು ಸಾರ್ವಜನಿಕರೊಬ್ಬರ ಮೊಬೈಲ್ ಪೋನ್‍ನಲ್ಲಿ ದಾಖಲಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. 

ಕೆ.ಪಿ.ಸಿ.ಸಿ.ಅಧ್ಯಕ್ಷರನ್ನು ಲೋಫರ್ ಎಂದಿರುವ ಜಿ.ಪಂ.ಸದಸ್ಯರ ವಿರುದ್ದ ಕೋರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ವೈ.ಹೆಚ್.ಹುಚ್ಚಯ್ಯ ಅವರನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ರಾಮಕೃಷ್ಣ ತಿಳಿಸಿದರು.

ಬಿಜೆಪಿ ನಾಯಕರು, ಬೇಕಾಬಿಟ್ಟಿ ಮಾತನಾಡುವ ಮೂಲಕ ತಮ್ಮದು ಎಂತಹ ಸಂಸ್ಕೃತಿ ಎಂಬುದನ್ನು ತೋರಿಸಿದ್ದಾರೆ. ಒಬ್ಬರು ಸಂವಿಧಾನ ಬದಲಿಸಲು ಮುಂದಾದರೆ, ಮತ್ತೊಬ್ಬರು ಸಭ್ಯತೆ ಮೀರಿ ಮಾತನಾಡಿರುವುದು ಸರಿಯಲ್ಲ. ಬಿಜೆಪಿ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಭ್ಯವಾಗಿ ನಡೆದುಕೊಳ್ಳವಂತೆ ತಿಳಿ ಹೇಳಬೇಕು. ಇಲ್ಲದಿದ್ದಲ್ಲಿ ಜನರೇ ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಟಿ.ಜಿ.ಲಿಂಗರಾಜು,ಸೊಂದೇನಹಳ್ಳಿ ಗ್ರಾ.ಪಂ.ಸದಸ್ಯ ರಾಜು ಮತ್ತಿತರರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News