ಮಾಂಸಾಹಾರ ಸೇವಿಸುವರು ಪ್ರತ್ಯೇಕ ತಟ್ಟೆ ಬಳಸಲು ಸೂಚನೆ: ಐಐಟಿ-ಬಾಂಬೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

Update: 2018-01-16 16:12 GMT

ಮುಂಬೈ, ಜ.16: ಭಾರತೀಯ ತಾಂತ್ರಿಕ ಸಂಸ್ಥೆ-ಬಾಂಬೆ (ಐಐಟಿ-ಬಿ)ಯ ಒಂದು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಇಮೇಲ್ ಒಂದು ಬಂದಿದ್ದು ಅದರಲ್ಲಿ ಮಾಂಸಾಹಾರ ಸೇವಿಸುವ ವಿದ್ಯಾರ್ಥಿಗಳು ಪ್ರತ್ಯೇಕ ತಟ್ಟೆಗಳನ್ನು ಬಳಸುವಂತೆ ಮನವಿ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಸ್ಯಾಹಾರ ಸೇವಿಸುವ ಹಲವು ವಿದ್ಯಾರ್ಥಿಗಳಿಂದ ಈ ಬಗ್ಗೆ ದೂರುಗಳು ಬಂದಿದೆ. ಮಾಂಸಾಹಾರ ಸೇವಿಸುವ ವಿದ್ಯಾರ್ಥಿಗಳು ಟ್ರೇ ಮಾದರಿಯ ತಟ್ಟೆಗಳನ್ನೇ ಬಳಸಬೇಕು. ಅವುಗಳು ವಿಶೇಷವಾಗಿ ಮಾಂಸಾಹಾರಕ್ಕೆಂದೇ ತಯಾರಿಸಲ್ಪಟ್ಟಿರುವ ತಟ್ಟೆಗಳಾಗಿವೆ. ಹಾಗಾಗಿ ರಾತ್ರಿ ಭೋಜನದ ಸಮಯದಲ್ಲಿ ಮಾಂಸಾಹಾರ ಸೇವಿಸುವವರು ಇಂಥ ತಟ್ಟೆಗಳನ್ನೇ ಬಳಸಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ ಎಂದು ಪತ್ರಿಕಾ ವರದಿ ತಿಳಿಸಿದೆ.

ಈ ಇಮೇಲ್‌ಅನ್ನು ಹಾಸ್ಟೆಲ್ 11ರ ಮೆಸ್ ಮಂಡಳಿ ಕಳುಹಿಸಿದೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಸ್ ಮಂಡಳಿ, ಈ ಇಮೇಲ್ ಸದ್ಯ ಇರುವ ನಿಯಮವನ್ನು ನೆನಪಿಸಲಷ್ಟೇ ಆಗಿದೆ. ಹಲವು ವರ್ಷಗಳಿಂದ ಮಾಂಸಾಹಾರವನ್ನು ಪ್ರತ್ಯೇಕ ತಟ್ಟೆಗಳಲ್ಲೇ ನೀಡಲಾಗುತ್ತಿದೆ. ಆ ನಿಯಮವನ್ನು ಪಾಲಿಸುವಂತೆ ನಾವು ವಿದ್ಯಾರ್ಥಿಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದೆ. ಈ ಬಗ್ಗೆ ಕೆಲವು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಇಂದು ಮಾಂಸಾಹಾರ ಸೇವನೆಗೆ ಪ್ರತ್ಯೇಕ ತಟ್ಟೆ ಪಡೆಯಲು ಸೂಚಿಸುತ್ತಾರೆ. ಮುಂದೆ ವಿವಿಧ ಜಾತಿ ಮತ್ತು ಧರ್ಮದ ಆಧಾರದಲ್ಲಿ ಪ್ರತ್ಯೇಕ ತಟ್ಟೆಗಳನ್ನು ನೀಡಬಹುದು ಎಂದು ಕಿಡಿಕಾರಿದ್ದಾರೆ. ಎಲ್ಲಾ ವಸತಿ ನಿಲಯಗಳಲ್ಲೂ ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ತಟ್ಟೆಗಳನ್ನು ನೀಡಲಾಗುತ್ತಿದೆ. ಹಾಗಾಗಿ ಮೊದಲನೆಯದಾಗಿ ಈ ಇಮೇಲ್‌ಅನ್ನು ಕಳುಹಿಸಿದ ಔಚಿತ್ಯವಾದರೂ ಏನು ಎಂಬುದು ಅರ್ಥವಾಗುತ್ತಿಲ್ಲ. ಇನ್ನೂ ದುರದೃಷ್ಟವೆಂದರೆ ಬಹಳಷ್ಟು ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು ಎಂದು ಐಐಟಿ-ಬಾಂಬೆಯ ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥರಾಗಿರುವ ಸೌಮ್ಯಾ ಮುಖರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News