ಬಜೆಟ್ 2018: ವಿವರ,ನಿರೀಕ್ಷೆ

Update: 2018-01-16 16:40 GMT

ಹೊಸದಿಲ್ಲಿ,ಜ.16: ವಿತ್ತಸಚಿವ ಅರುಣ್ ಜೇಟ್ಲಿಯವರು ಫೆ.1ರಂದು ಮಧ್ಯಾಹ್ನ ಕೇಂದ್ರ ಮುಂಗಡಪತ್ರವನ್ನು ಮಂಡಿಸಲಿದ್ದಾರೆ. ಕಳೆದ ವರ್ಷವೂ ಫೆ.1ರಂದೇ ಮುಂಗಡಪತ್ರ ಮಂಡನೆಯಾಗಿತ್ತು. ಇದು ನರೇಂದ್ರ ಮೋದಿ ಸರಕಾರದ ಐದನೆಯ ಮತ್ತು 2019ರ ಲೋಕಸಭಾ ಚುನಾವಣೆಗೆ ಮುನ್ನ ಅಂತಿಮ ಪೂರ್ಣ ಪ್ರಮಾಣದ ಮುಂಗಡಪತ್ರ ವಾಗಿರಲಿದೆ.

  ಸಂಸತ್ತಿನ ಮುಂಗಡಪತ್ರ ಅಧಿವೇಶನವು ಜ.29ರಿಂದ ಆರಂಭಗೊಳ್ಳಲಿದೆ. ಮೊದಲ ಹಂತದ ಅಧಿವೇಶನವು ಜ.29ರಿಂದ ಫೆ.9ರವರೆಗೆ ನಡೆಯಲಿದ್ದು, ಎರಡನೇ ಹಂತದ ಅಧಿವೇಶನವು ಮಾ.5ರಿಂದ ಎಪ್ರಿಲ್ 6ರವರೆಗೆ ನಡೆಯಲಿದೆ. ಬಜೆಟ್ ಪ್ರಸ್ತಾವಗಳಿಗೆ ಸ್ಥಾಯಿ ಸಮಿತಿಗಳ ಒಪ್ಪಿಗೆ ದೊರೆಯುವಂತಾಗಲು ಇವೆರಡೂ ಅಧಿವೇಶನಗಳ ನಡುವೆ ವಿರಾಮವನ್ನು ನೀಡಲಾಗಿದೆ.

ಮೋದಿ ಸರಕಾರವು ಕಳೆದೆರಡು ವರ್ಷಗಳಲ್ಲಿ ತೆಗೆದುಕೊಂಡಿದ್ದ ನೋಟು ನಿಷೇಧ ಮತ್ತು ಜಿಎಸ್‌ಟಿ ಈ ಎರಡು ಅತ್ಯಂತ ಮುಖ್ಯ ಹಣಕಾಸು ನಿರ್ಧಾರಗಳ ಬಳಿಕ ಬರುತ್ತಿರುವ ಈ ವರ್ಷದ ಮುಂಗಡಪತ್ರವು ನಿರ್ಣಾಯಕವಾಗಲಿದೆ. ಹೀಗಾಗಿ ಬಜೆಟ್‌ನಲ್ಲಿ ಏನಿರಲಿದೆ ಎನ್ನುವುದರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.

ಬಜೆಟ್ 2018ರಲ್ಲಿ ಕೃಷಿ ಅತ್ಯುನ್ನತ ಆದ್ಯತೆಯಾಗಿರಲಿದೆ ಎಂದು ಜೇಟ್ಲಿ ಕಳೆದ ವಾರ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದರು.

ಅಧಿಕ ಉತ್ಪಾದನೆಯಿಂದಾಗಿ ರೈತರಿಗೆ ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆಗಳು ದೊರೆಯುತ್ತಿಲ್ಲವಾದ್ದರಿಂದ ಕೆಲವೆಡೆ ಬೆಲೆ ಕುಸಿತದ ಸಮಸ್ಯೆಗಳು ಕಂಡುಬಂದಿವೆ ಎಂದೂ ಹೇಳಿದ್ದ ಜೇಟ್ಲಿ, ರೈತರನ್ನು ಈ ಸ್ಥಿತಿಯಿಂದ ಪಾರು ಮಾಡಲು ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಇವು ಸ್ವಲ್ಪ ಪರಿಣಾಮವನ್ನು ಬೀರಿವೆ ಎಂದು ತಿಳಿಸಿದ್ದರು.

ಬಜೆಟ್ ದಿನಾಂಕಕ್ಕೆ ಮುನ್ನ ಊಹಾಪೋಹಗಳು ದಟ್ಟವಾಗಿದ್ದು, ನಾಲ್ಕು ದೊಡ್ಡ ರಾಜ್ಯಗಳಾದ ಕರ್ನಾಟಕ, ರಾಜಸ್ಥಾನ, ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶಗಳಲ್ಲಿ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿರುವುದರಿಂದ ಜನರನ್ನು ಓಲೈಸುವ ಮುಂಗಡಪತ್ರ ಹೊರಬರಬಹುದು ಎನ್ನುವುದು ತಜ್ಞರ ಲೆಕ್ಕಾಚಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News