ಕೊಳ್ಳೇಗಾಲ: ಬಿಎಸ್‍ಪಿ ವತಿಯಿಂದ ಜನಜಾಗೃತಿ ರ್ಯಾಲಿ

Update: 2018-01-16 17:36 GMT

ಕೊಳ್ಳೇಗಾಲ,ಜ.16: ಪ್ರಜೆಗಳಿಂದ ಸೃಷ್ಟಿಯಾದ ಸರ್ಕಾರಗಳು ಪ್ರಜೆಗಳಿಗಾಗಿ ಕರ್ತವ್ಯ  ಮಾಡದೇ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಜನಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಹೇಳಿದರು.

ಪಟ್ಟಣದ ಅಚ್ಗಾಲ್ ವೃತ್ತದಲ್ಲಿ ಬಿಎಸ್‍ಪಿ ವತಿಯಿಂದ ಜ.15 ರಿಂದ ಜ.26 ರವರಿಗೆ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ ರಾಜ್ಯಾಧ್ಯಂತ ಜನಜಾಗೃತಿ ಕಾರ್ಯಕ್ರಮದ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಒಂದು ವರ್ಷಕ್ಕೆ 10 ಲಕ್ಷ ಕೋಟಿ ಆಹಾರ ಪದಾರ್ಥಗಳನ್ನು ಬೆಳೆದು ದೇಶಕ್ಕೆ ನೀಡುವ ರೈತರ ಕೃಷಿ ಸಾಲ ಮನ್ನಾ ಮಾಡಿದರೆ ಬ್ಯಾಂಕ್‍ಗಳು ದಿವಾಳಿಯಾಗುತ್ತದೆಂದು ಹೇಳುವ ಕೇಂದ್ರ ಸರ್ಕಾರ, ಶ್ರೀಮಂತ ಬಂಡವಾಳ ಶಾಯಿಗಳು, ಕೈಗಾರಿಕಾ ಉದ್ಯಮಿಗಳಿಗೆ ಸಬ್ಸಿಡಿ ರೂಪದಲ್ಲಿ ಹಣವನ್ನು ನೀಡುತ್ತಿರುವುದು ದಿವಾಳಿಯಾಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೇಸ್ ಸರ್ಕಾರ ಚುನಾವಣೆಗೂ ಮುನ್ನ ಹೇಳಿದ ಭರವಸೆಗಳನ್ನು ಸಂರ್ಪೂಣವಾಗಿ ಈಡೇರಿಸದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಪೌಷ್ಟಿಕತೆಯಿಂದ, ಬಡತನದಿಂದ ಜನರು ಸಾಯುತ್ತಿದ್ದಾರೆ. ಸರ್ಕಾರ ನೀಡುವಂತಹ ಅನ್ನಭಾಗ್ಯ, ಕ್ಷೀರಭಾಗ್ಯ, ಮೊಟ್ಟೆಭಾಗ್ಯ ನೀಡಿದರೂ ಅಪೌಷ್ಟಿಕತೆಯಿಂದ ಪ್ರತಿನಿತ್ಯ ಸಾಯುತ್ತಿರುವವರನ್ನು ತಡೆಯಲು ಆಗುತ್ತಿಲ್ಲವೆಂದು ಆರೋಪಿಸಿದರು.

ಭಾರತೀಯ ಜನತಾ ಪಾರ್ಟಿಯವರು ಪರಿವರ್ತನಾ ರ್ಯಾಲಿ ಮಾಡುವುದಾಗಿ ಧರ್ಮ, ಜಾತಿಗಳನ್ನು ಎತ್ತಿಕಟ್ಟಿ ಕೋಮುಗಲಭೆಯನ್ನು ಸೃಷ್ಟಿಸುತ್ತಿದ್ದಾರೆ. ಕಾಂಗ್ರೇಸ್ ಪಕ್ಷದವರು ಸಾಧನಾ ಸಮಾವೇಶ ಮಾಡುತ್ತಾ ಬಡವರನ್ನು ಬಡವರಾಗಿಯೇ ಉಳಿಸಿದ್ದಾರೆ. ಪ್ರಜಾಪ್ರಭುತ್ವವೇ ಕೆಟ್ಟು ಹೋಗುತ್ತಿದೆ. ಜನರಿಗೆ ಮೋಸ, ದ್ರೋಹ ಮಾಡುವವರಿಗೆ ಬುದ್ದಿ ಕಲಿಸಬೇಕಾದರೆ ಪ್ರಜಾಪ್ರಭುತ್ವವನ್ನು ಉಳಿವಿಗಾಗಿ ಈ ಬಾರಿ ಒಂದು ಅವಕಾಶವನ್ನು ಬಹುಜನ ಸಮಾಜ ಪಾರ್ಟಿಗೆ ನೀಡಬೇಕೆಂದು ಕೇಳಿಕೊಳ್ಳುವ ಸಲುವಾಗಿ ರಾಜ್ಯಾದ್ಯಂತಹ ಜನಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳು 26 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರ್ಯಾಲಿಯಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ಬಾಗಲಿರೇವಣ್ಣ, ಜಿಲ್ಲಾ ಉಪಾಧ್ಯಕ್ಷ ಸೋಮಣ್ಣ ಉಪ್ಪಾರ್,  ನಗರಸಭೆ ಸದಸ್ಯರಾದ ರಾಮಕೃಷ್ಣ, ರಂಗಸ್ವಾಮಿ, ಮುಖಂಡರುಗಳಾದ ಜಗದೀಶ್, ಕೆಂಪನಪಾಳ್ಯ ಸಿದ್ದರಾಜು, ವೀರಶೆಟ್ಟಿ, ಮರಳ್ಳಿ ಮಾದಪ್ಪ, ಶಿವಮೂರ್ತಿ, ರಾಜೇಂದ್ರ ವಕೀಲ, ಪಂಚಾಕ್ಷರಿ, ನಾಗೇಂದ್ರ ಅರಕಲವಾಡಿ, ರುದ್ರಸ್ವಾಮಿ, ಇನಾಯತ್‍ಉಲ್ಲಾ, ಜಕಾವುಲ್ಲಾ, ರಮೇಶ್ ದೇವಾಂಗ, ಮತೀಶ್ ದೇವಾಂಗ, ರಾಚಪ್ಪ, ಚೌಡಯ್ಯ, ನಾಗರಾಜು, ರಾಜು ಶಂಕನಪುರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News