ಮದ್ದೂರು: ರೈತರ ಆಭರಣ ಹರಾಜು ವಿರೋಧಿಸಿ ಪ್ರತಿಭಟನೆ

Update: 2018-01-17 17:30 GMT

ಮದ್ದೂರು, ಜ.17: ಪಟ್ಟಣದ ವಿಜಯ ಬ್ಯಾಂಕ್‍ನಲ್ಲಿ ರಹಸ್ಯ ಸ್ಥಳದಲ್ಲಿ ಬ್ಯಾಂಕ್ ಅಧಿಕಾರಿಗಳು ರೈತರ ಗಿರವಿಯಿಟ್ಟ ಒಡವೆಗಳನ್ನು ಬಹಿರಂಗ ಹರಾಜು ಮಾಡುತಿದ್ದಾರೆಂದು ಆರೋಪಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗು ತೆಂಗು ಬೆಳೆಗಾರರ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಬ್ಯಾಂಕ್ ಪಕ್ಕದಲ್ಲಿ ವ್ಯವಸ್ಥಾಪಕ  ಮೊಹನ್‍ನಾಯಕ್ ಮತ್ತು ಪ್ರಾಂತೀಯ ಅಧಿಕಾರಿ ಪ್ರಕಾಶ್ ನೇತೃತ್ವದಲ್ಲಿ ಗಿರವಿ ಆಭರಣಗಳ ಬಹಿರಂಗ ಹರಾಜು ಮಾಡುತ್ತಿದ್ದಾರೆಂಬ ಮಾಹಿತಿ ತಿಳಿದ ಸಂಘಟಕರು, ಸ್ಥಳಕ್ಕೆ ಧಾವಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬರದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದು, ಯಾವುದೇ ಕಾರಣಕ್ಕೂ ಆಭರಣಗಳನ್ನು ಹರಾಜು ಮಾಡಬಾರದು ಎಂದು ಪ್ರತಿಭಟನಾಕಾರರು ಅಡ್ಡಿಪಡಿಸಿದರು. ಈ ಸಂದರ್ಭ ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಆಭರಣ ಹರಾಜು ಪ್ರಕ್ರಿಯೆಯನ್ನು ಕೈಬಿಡಲಾಯಿತು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ಜಿಲ್ಲಾಧಿಕಾರಿಗಳು ಹಾಗೂ ಸರಕಾರ ರೈತರಿಗೆ ನೊಟೀಸ್ ನೀಡದಂತೆ ಮತ್ತು ಆಭರಣ ಹರಾಜು ಹಾಕದಂತೆ ಸೂಚಿಸಿದೆ. ಹರಾಜಿಗೆ ಮುಂದಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ, ಗುಂಡಮಹೇಶ್, ಜಮೀರ್‍ ಅಹಮದ್, ಶೇಖರ್, ರಮೇಶ್, ಕುಮಾರ್, ಶಂಕರ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News