ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಯಶಸ್ವಿ ಉಡಾವಣೆ

Update: 2018-01-18 15:14 GMT

ಬಾಲಸೂರು, ಜ. 18: ಭಾರತ ಗುರುವಾರ ಒರಿಸ್ಸಾದ ಪರೀಕ್ಷಾ ವಲಯದಿಂದ ನೆಲದಿಂದ ನೆಲಕ್ಕೆ ಚಿಮ್ಮುವ ಪ್ರಕ್ಷೇಪ ಕ್ಷಿಪಣಿ ಅಗ್ನಿ-5ನ್ನು ಪರೀಕ್ಷಾರ್ಥ ಯಶಸ್ವಿಯಾಗಿ ಉಡಾಯಿಸಲಾಯಿತು. ಪರಮಾಣು ಸಿಡಿತಲೆಗಳನ್ನು ಕೊಂಡೊಯ್ಯಬಲ್ಲ ಈ ಕ್ಷಿಪಣಿ ಅಗ್ನಿ ಸರಣಿಯ ಅತಿ ಸುಧಾರಿತ ಕ್ಷಿಪಣಿ. ಇದು 5 ಸಾವಿರ ಕಿ.ಮೀ.ಗೂ ಅಧಿಕ ವ್ಯಾಪ್ತಿಯ ದಾಳಿ ಸಾಮರ್ಥ್ಯ ಹೊಂದಿದೆ.

ಬಳಕೆದಾರರಿಗೆ ಸಂಬಂಧಿಸಿದ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯಿಂದ ದೇಶದ ಕ್ಷಿಪಣಿ ಸಾಮರ್ಥ್ಯ ಹಾಗೂ ನಿರೋಧಕ ಸಾಮರ್ಥ್ಯ ವೃದ್ಧಿಸಲಿದೆ. ಎಲ್ಲ ರಾಡರ್, ಟ್ರಾಕಿಂಗ್ ವ್ಯವಸ್ಥೆ, ರೇಂಜ್ ಸ್ಟೇಶನ್ ಕ್ಷಿಪಣಿ ಹಾರಾಟದ ಸಾಮರ್ಥ್ಯ ಪರಿಶೀಲಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಸಂಪೂರ್ಣ ಯಸಸ್ವಿಯಾಗಿದೆ ಎಂದು ಹೇಳಿರುವ ಮೂಲಗಳು, ಈ ಅತ್ಯಾಧುನಿಕ ಕ್ಷಿಪಣಿ 19 ನಿಮಿಷ ಕ್ರಮಿಸಿದೆ ಹಾಗೂ 4,900 ಕಿ.ಮೀ. ದೂರ ಸಂಚರಿಸಿದೆ ಎಂದಿದೆ.

ಈ ಹಿಂದೆ ವೀಲರ್ ಐಲ್ಯಾಂಡ್ ಎಂದು ಕರೆಯಲಾಗುತ್ತಿದ್ದ ಅಬ್ದುಲ್ ಕಲಾಂ ಸಮಗ್ರ ಪರೀಕ್ಷಾ ವಲಲಯದಲ್ಲಿರುವ 4ನೇ ಉಡಾವಣಾ ವೇದಿಕೆಯಿಂದ ಬೆಳಗ್ಗೆ 9.54ಕ್ಕೆ ಸಂಚಾರಿ ವೇದಿಕೆಯಲ್ಲಿ ಆರೋಹಿಸಲಾಗಿದ್ದ ಉಡಾವಕದಿಂದ ಈ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾಯಿಸಲಾಯಿತು ಎಂದು ಅದು ತಿಳಿಸಿದೆ.

 ಅಭಿವೃದ್ಧಿಗೆ ಸಂಬಂಧಿಸಿದ 4 ಕ್ಷಿಪಣಿಗಳನ್ನು ಪರೀಕ್ಷಾರ್ಥ ಯಶಸ್ವಿಯಾಗಿ ಉಡಾಯಿಸಿದ ಬಳಿಕ, ಇದೀಗ ಮೊದಲ ಬಾರಿಗೆ ಬಳಕೆದಾರರಿಗೆ ಸಂಬಂಧಿಸಿದ ಅಗ್ನಿ-5 ಕ್ಷಿಪಣಿಯನ್ನು ಪರೀಕ್ಷಾರ್ಥ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News