ಆಸ್ಪತ್ರೆಗಳ ಸುಲಿಗೆ: ಮತ್ತೊಂದು ಮಗು ಬಲಿ

Update: 2018-01-19 03:54 GMT

ಗುರ್‌ಗಾಂವ್, ಜ.19: ಫೋರ್ಟಿಸ್ ಆಸ್ಪತ್ರೆಯಲ್ಲಿ ದುಬಾರಿ ಶುಲ್ಕ ವಿಧಿಸುವ ಮೂಲಕ ರೋಗಿಗಳ ಸುಲಿಗೆ ಮಾಡಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ನಗರದ ಮತ್ತೊಂದು ಆಸ್ಪತ್ರೆಯಲ್ಲಿ ಇಂಥ ಸುಲಿಗೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ 17 ತಿಂಗಳ ಮಗು ಗುರುವಾರ ಮೃತಪಟ್ಟಿದೆ.
ಮಗುವನ್ನು ಕಳೆದುಕೊಂಡರೂ ನಾಲ್ಕು ಗಂಟೆಗಳ ಚಿಕಿತ್ಸೆಗೆ 46 ಸಾವಿರ ರೂಪಾಯಿಯ ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಮಗುವಿನ ಕುಟುಂಬದವರು ಆಪಾದಿಸಿದ್ದಾರೆ.

ಕಫ ಮತ್ತು ಜ್ವರದಿಂದ ಬಳಲುತ್ತಿದ್ದ ಸುದೀಪ ದೇವನಾಥ್ ಎಂಬ ಮಗುವನ್ನು ಬುಧವಾರ ರಾತ್ರಿ ಆರ್ಟೆಮಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತರ ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಬಳಿಕ ಮಗುವನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು.

"ನನ್ನ ಸೊಸೆ ಸುದೀಪಾಳನ್ನು ರಾತ್ರಿ 1:30ಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು. ತಕ್ಷಣ ವೈದ್ಯರು 30 ಸಾವಿರ ರೂಪಾಯಿ ಪಾವತಿಸುವಂತೆ ಸೂಚಿಸಿದರು. ಆದರೆ ಕೇವಲ 20 ಸಾವಿರ ರೂ. ಮಾತ್ರ ನಮ್ಮಲ್ಲಿತ್ತು. ಪರಿಸ್ಥಿತಿ ವಿವರಿಸಿದಾಗ ವೈದ್ಯರು ಒಪ್ಪಿಕೊಂಡರು" ಎಂದು ಮಾವ ಪ್ರಶಾಂತ್ ದೇವನಾಥ್ ವಿವರಿಸಿದರು.

ಪಶ್ಚಿಮ ಬಂಗಾಳ ಮೂಲದ ಮಗುವಿನ ಪಾಲಕರು ಮಗುವಿನ ಚಿಕಿತ್ಸೆಗಾಗಿ ದಿಲ್ಲಿಗೆ ಆಗಮಿಸಿದಾಗ, ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ, ಮಗುವಿನ ಆರೋಗ್ಯ ಸ್ಥಿತಿ ಗಂಭೀರವೇನೂ ಅಲ್ಲ. ಶೀಘ್ರ ಚೇತರಿಸಿಕೊಳ್ಳಲಿದೆ ಎಂದು ಹೇಳಿದ್ದರು. ಆದರೆ ಮುಂಜಾನೆ 5:30ರ ವೇಳೆಗೆ ಮಗು ಮೃತಪಟ್ಟಿದೆ ಎಂದು ಹೇಳಿದ್ದಾಗಿ ಕುಟುಂಬದವರು ಹೇಳಿದರು.

ಸಾವಿನ ಕಾರಣ ಕೇಳಿದಾಗ, ವೈದ್ಯರು ಮಾತನಾಡಲೂ ನಿರಾಕರಿಸಿದರು. ಬದಲಾಗಿ 45,763.32 ರೂಪಾಯಿಯ ಬಿಲ್ ನೀಡಿದರು ಎಂದು ಕುಟುಂಬ ಆಪಾದಿಸಿದೆ. ಹಣ ನೀಡದೇ ಮೃತದೇಹ ಹಸ್ತಾಂತರಿಸಲು ನಿರಾಕರಿಸಿದ ಬಗ್ಗೆ ಪ್ರಶ್ನಿಸಿದಾಗ, ಬಿಲ್ ಪಾವತಿಸುವಂತೆ ಸಿಬ್ಬಂದಿ ಒತ್ತಾಯಿಸಿದರು. ಕೊನೆಗೂ ಹಣ ಹೊಂದಿಸಿ ಪಾವತಿ ಮಾಡಿದ ಬಳಿಕ ಮೃತದೇಹ ಪಡೆದೆವು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News