ಕಾಲುದಾರಿಯಲ್ಲಿ ನಡೆದ ದಲಿತರಿಗೆ ಸಾಮಾಜಿಕ ಬಹಿಷ್ಕಾರ !

Update: 2018-01-20 16:19 GMT

ಹೈದರಾಬಾದ್, ಜ.20: ಎಲ್ಲರೂ ನಡೆದಾಡುವ ಕಾಲುದಾರಿಯಲ್ಲಿ ನಡೆದು ಅದರ ಪಕ್ಕದಲ್ಲಿ ಪ್ರತಿಷ್ಟಾಪಿಸಲಾಗಿದ್ದ ದೇವರನ್ನು ಮಲಿನ ಮಾಡಿದರು ಎಂದು ಆರೋಪಿಸಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಮ್ ಜಿಲ್ಲೆಯ ಕಂಚರ್ಲಗುಂಟ ಎಂಬ ಗ್ರಾಮದಲ್ಲಿ ಗುರುವಾರ ನಡೆದಿದ್ದು ಶನಿವಾರದಂದು ಬೆಳಕಿಗೆ ಬಂದಿದೆ.

ಹಳ್ಳಿಯ ಜನರು ನಡೆದಾಡುವ ಕಾಲುದಾರಿಯ ಪಕ್ಕದಲ್ಲಿ ದೇವರನ್ನು ಪ್ರತಿಷ್ಟಾಪಿಸಲಾಗಿದೆ. ಹಾಗಾಗಿ ಆ ದಾರಿಯಲ್ಲಿ ಕೆಳವರ್ಗಕ್ಕೆ ಸೇರಿದ ಮಾದಿಗ ಸಮುದಾಯಕ್ಕೆ ಸೇರಿದ ದಲಿತರು ನಡೆದಾಡಬಾರವು ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಗ್ರಾಮದ ಮೇಲ್ವರ್ಗದ ಜನರು ಸೂಚಿಸಿದ್ದರು. ಈ ಕಾಲುದಾರಿಯಲ್ಲಿ ದಲಿತರು ನಡೆದಾಡುವುದರಿಂದ ಆ ರಸ್ತೆಯ ಪಕ್ಕದಲ್ಲಿ ಪ್ರತಿಷ್ಟಾಪಿಸಲಾಗಿರುವ ದೇವರಿಗೆ ಮಲಿನವಾಗುತ್ತದೆ ಎಂದು ಅವರು ತಿಳಿಸಿದ್ದರು. ಜೊತೆಗೆ ದಲಿತರು ಓಡಾಡಲು ಕಚ್ಚಾರಸ್ತೆಯೊಂದನ್ನು ನಿರ್ಮಿಸಿ ಅದರಲ್ಲಿಯೇ ದಲಿತರು ತಮ್ಮ ವಿವಾಹ ಮತ್ತು ಶವ ಮೆರವಣಿಗೆಯನ್ನೂ ಕೊಂಡೊಯ್ಯುವಂತೆ ಸೂಚಿಸಿದ್ದರು.

ಹಲವು ದಲಿತರು ಮೇಲ್ವರ್ಗದವರ ಈ ಸೂಚನೆಯನ್ನು ಧಿಕ್ಕರಿಸಿ ಕಾಲುದಾರಿಯನ್ನು ಬಳಸುವುದನ್ನು ಮುಂದುವರಿಸಿದ್ದರು. ಇದರಿಂದ ಆಕ್ರೋಶಗೊಂಡ ಮೇಲ್ವರ್ಗದವರು ಗುರುವಾರದಂದು ಮಾದಿಗ ಸಮುದಾಯದ ವ್ಯಕ್ತಿಗಳ ಜೊತೆ ಸಭೆ ನಡೆಸಿ ಕಾಲುದಾರಿಯನ್ನು ಬಳಸದಂತೆ ಮತ್ತು ಬಳಸಿದ್ದೇ ಆದಲ್ಲಿ ಸಾಮಾಜಿಕ ಬಹಿಷ್ಕಾರವನ್ನು ಎದುರಿಸುವಂತೆ ಎಚ್ಚರಿಸಿದ್ದರು. ಇದರಿಂದ ಭಯಗೊಂಡ ದಲಿತರು ಮೇಲ್ಜಾತಿಯವರನ್ನು ಸಮಾಧಾನಪಡಿಸಲು ಯತ್ನಿಸಿದಾಗ ದಲಿತರು ಆ ರಸ್ತೆಯಲ್ಲಿ ನಡೆದಾಡಬಹುದು. ಆದರೆ ವಾಹನಗಳಲ್ಲಿ ಸಾಗುವಂತಿಲ್ಲ ಎಂದು ಸೂಚಿಸಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

ಆದರೆ ಈ ಆದೇಶವನ್ನೂ ಧಿಕ್ಕರಿಸಿದ ಮಹೇಂದ್ರ ಎಂಬ ದಲಿತ ವ್ಯಕ್ತಿ ವಿವಾದಗ್ರಸ್ಥ ರಸ್ತೆಯ ಮೇಲೆ ಬೈಕ್‌ನಲ್ಲಿ ಕಂಡುಕುರು ಪಟ್ಟಣಕ್ಕೆ ತೆರಳಿದ್ದ ವೇಳೆ ಆತನನ್ನು ತಡೆದ ಮೇಲ್ಜಾತಿಯ ಜನರು ಆತನ ಬೈಕ್‌ನ ಕೀಯನ್ನು ಕಿತ್ತುಕೊಂಡಿದ್ದರು. ಆಮೂಲಕ ಇಡೀ ದಲಿತ ಸಮುದಾಯದ ಮೇಲೆಯೇ ಸಾಮಾಜಿಕ ಬಹಿಷ್ಕಾರ ಹೇರಲ್ಪಟ್ಟಿತು. ಈಗ ದಲಿತರ ಮಕ್ಕಳು ಶಾಲೆಗೆ ಹೋಗಲೂ ಆಗದೆ ಮನೆಯಲ್ಲೇ ಇರುವಂತಾಗಿದೆ ಎಂದು ವರದಿ ತಿಳಿಸಿದೆ.

ದಲಿತರು ಕೂಡಾ ಸುಶಿಕ್ಷಿತರಾಗುತ್ತಿದ್ದಾರೆ ಮತ್ತು ಸ್ವಂತ ವಾಹನಗಳನ್ನು ಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಮೇಲ್ವರ್ಗದ ಜನರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ದಲಿತರು ಅವರಿಗೆ ಸರಿಸಮಾನಾಗಿ ಬೆಳೆಯುತ್ತಿರುವುದನ್ನು ಮೇಲ್ಜಾತಿಯವರು ಸಹಿಸಲಾರರು. ಹಾಗಾಗಿಯೇ ಇಂಥ ಬಹಿಷ್ಕಾರಗಳನ್ನು ಹಾಕುತ್ತಿದ್ದಾರೆ ಎಂದು ಸ್ಥಳೀಯ ದಲಿತ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ನಮ್ಮ ಜೊತೆ ಮಾತನಾಡಿದರೆ ಹತ್ತು ಸಾವಿರ ರೂ. ದಂಡ ಕಟ್ಟ ಬೇಕಾಗುತ್ತದೆ ಎಂಬ ಭಯದಿಂದ ಯಾದವ ಸಮುದಾಯದವರು ನಮಗೆ ಹಾಲು ನೀಡುವುದನ್ನು ನಿಲ್ಲಿಸಿದ್ದಾರೆ ಮತ್ತು ಇತರರು ಅವರ ಗದ್ದೆಗಳಲ್ಲಿ ನಮಗೆ ಕೆಲಸ ನೀಡುತ್ತಿಲ್ಲ ಎಂದು ದಲಿತರು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಪೊಲೀಸರು ಮಧ್ಯಪ್ರವೇಶಿಸಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಕಾಶಮ್ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಪ್ರಮೋದ್ ಕುಮಾರ್, ನಾವು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ್ದು ಅವರು ಒಮ್ಮತಕ್ಕೆ ಬಂದಿದ್ದು ದಲಿತರ ಮೇಲೆ ಹಾಕಲಾಗಿದ್ದ ನಿರ್ಬಂಧಗಳನ್ನು ಹಿಂಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ರಸ್ತೆಯ ಸಮೀಪ ದೇವರ ಮೂರ್ತಿಯನ್ನು ಪ್ರತಿಷ್ಟಾಪಿಸಿರುವುದರಿಂದ ಗ್ರಾಮದ ಯಾರು ಕೂಡಾ ಆ ರಸ್ತೆಯಲ್ಲಿ ಶವವನ್ನು ಸಾಗಿಸಬಾರದು ಎಂದು ಗ್ರಾಮಸ್ಥರಿಗೆ ಸೂಚಿಸಲಾಗಿತ್ತು. ಆದರೆ ದಲಿತರು ಈ ಸೂಚನೆಯನ್ನು ಉಲ್ಲಂಘಿಸಿ ಆ ರಸ್ತೆಯಲ್ಲಿ ಶವ ಸಾಗಿಸಿದ ಪರಿಣಾಮವಾಗಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು ಎಂದು ಪ್ರಮೋದ್ ಇದೇ ವೇಳೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News