ಬುಡಕಟ್ಟು ಸಮುದಾಯದ ಈ ಬಾಲಕರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದದ್ದೇಕೆ?

Update: 2018-01-22 10:24 GMT

ಛತ್ತೀಸ್ ಗಢ, ಜ.22: ರಾಜ್ಯದ ಈಶಾನ್ಯ ಜಶ್ಪುರ್ ಜಿಲ್ಲೆಯ ಇಬ್ಬರು ಬುಡಕಟ್ಟು ಸಮುದಾಯದ ಬಾಲಕರು ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಜಿಲ್ಲಾಡಳಿತ, ರಾಜ್ಯ ಸರಕಾರ, ಮಾಧ್ಯಮಗಳು, ಜನರು ಇವರನ್ನು ಅಭಿನಂದಿಸುತ್ತಿದ್ದಾರೆ. ಇದಕ್ಕೆ ಕಾರಣ ಈ ಬಾಲಕರು ದಿಲ್ಲಿ ಐಐಟಿಗೆ ಆಯ್ಕೆಯಾಗಿರುವುದು. ಕುಡೆಕೆಲಾ ಹಾಗು ಜರ್ಗಾಂ ಬುಡಕಟ್ಟು ಗ್ರಾಮದ ದೀಪಕ್ ಕುಮಾರ್ ಹಾಗು ನಿತೇಶ್ ಪೈಂಕ್ರಾ ದಿಲ್ಲಿ ಐಐಟಿಯ ಜವಳಿ ವಿಭಾಗಕ್ಕೆ ಪ್ರವೇಶ ಪಡೆದು ಸಾಧನೆ ಮೆರೆದಿದ್ದಾರೆ.

“ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಹಾಗು ಐಐಟಿಗೆ ಜಶ್ಪುರದಿಂದ 21 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಇಬ್ಬರು ದಿಲ್ಲಿಯ ಐಐಟಿಗೆ ಆಯ್ಕೆಯಾಗಿದ್ದಾರೆ” ಎಂದು ಜಶ್ಪುರದ ಕಲೆಕ್ಟರ್ ಪ್ರಿಯಾಂಕ ಶುಕ್ಲಾ ಹೇಳಿದ್ದಾರೆ.

ದೀಪಕ್ ಕುಮಾರ್ ರ ತಂದೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರಿ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ದೀಪಕ್ ಜಿಲ್ಲಾಡಳಿತ ವತಿಯಿಂದ ನಡೆಯುವ ಐಐಟಿ ಪ್ರವೇಶ ಪರೀಕ್ಷೆಯ ಕೋಚಿಂಗ್ ತರಗತಿಗೆ ಸೇರಿದ್ದ. ದಿಲ್ಲಿ ಐಐಟಿಗೆ ಆಯ್ಕೆಯಾಗುತ್ತಲೇ ಜಿಲ್ಲಾಧಿಕಾರಿ ದೀಪಕ್ ಕುಮಾರ್ ದಿಲ್ಲಿಗೆ ತೆರಳಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದಾರೆ.

“ಇದು ನಿಜಕ್ಕೂ ಹೆಮ್ಮೆಯ ವಿಷಯ ಹಾಗು ಭವಿಷ್ಯದ ಜನಾಂಗಕ್ಕೆ ಮಾದರಿಯಾಗಿದೆ” ಎಂದವರು ಹೇಳಿದ್ದಾರೆ.

ಇನ್ನೋರ್ವ ವಿದ್ಯಾರ್ಥಿ ನಿತೇಶ್ ನ ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಬಲರಾಂಪುರ್ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಈತ  ಐಐಟಿ ಕೋಚಿಂಗ್ ತರಗತಿಗೆ ಸೇರಲು ಜಶ್ಪುರಕ್ಕೆ ವಾಪಸ್ ಬಂದಿದ್ದ.

ಇಬ್ಬರು ವಿದ್ಯಾರ್ಥಿಗಳು ಶೀಘ್ರವೇ ದಿಲ್ಲಿಗೆ ತೆರಳಲಿದ್ದು, ಜಿಲ್ಲಾಡಳಿತ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News