ಯೋಧ ಚಂದನ್ ಕುಮಾರ್ ಅಂತ್ಯಕ್ರಿಯೆ ನಡೆಸದೆ ಧರಣಿ ಕುಳಿತ ಕುಟುಂಬಸ್ಥರು

Update: 2018-01-22 13:20 GMT

ಚಂದೌಲಿ, ಜ.22: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ಅನುಪಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹುತಾತ್ಮ ಯೋಧ ಚಂದನ್ ಕುಮಾರ್ ರೈಯವರ ಕುಟುಂಬಸ್ಥರು, ಈ ಇಬ್ಬರು ಸ್ಥಳಕ್ಕಾಗಮಿಸದೆ ಯೋಧನ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮಂಕೋಟೆ ಸೆಕ್ಟರ್ ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚಂದನ್ ಕುಮಾರ್ ಶನಿವಾರ ರಾತ್ರಿ ಪಾಕ್ ಸೇನೆ ನಡೆಸಿದ ದಾಳಿಯಲ್ಲಿ ಗಾಯಗೊಂಡು ಮೃತಪಟ್ಟಿದ್ದರು. 25 ವರ್ಷದ ಚಂದನ್ ಅವರಿಗೆ ಮುಂದಿನ ತಿಂಗಳು ವಿವಾಹ ನಿಶ್ಚಯವಾಗಿತ್ತು. ಇದಕ್ಕಾಗಿ ರಜೆ ಪಡೆದಿದ್ದ ಅವರು ಮುಂದಿನ ತಿಂಗಳ ಆರಂಭದಲ್ಲಿ ತನ್ನ ಸ್ವಗ್ರಾಮಕ್ಕೆ ಬರುವವರಿದ್ದರು.

ಪಾರ್ಥಿವ ಶರೀರ ರವಿವಾರ ವಾರಣಾಸಿ ವಿಮಾನ ನಿಲ್ದಾಣವನ್ನು ತಲುಪಿದ್ದು, ನಂತರ 39 ಗೋರ್ಖಾ ತರಬೇತಿ ಕೇಂದ್ರಕ್ಕೆ ಸಾಗಿಸಲಾಯಿತು. ಸೋಮವಾರ ಬೆಳಗ್ಗೆ ಚಂದನ್ ರ ಸ್ವಗ್ರಾಮ ನದೇಸರ್-ಮರುಫ್ಪುರ್ ಗ್ರಾಮಕ್ಕೆ ಪಾರ್ಥಿವ ಶರೀರ ತಲುಪಿದೆ.

ಆದರೆ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ ಯೋಧ ಚಂದನ್ ಕುಮಾರ್ ಕುಟುಂಬಸ್ಥರು ನಿರಾಕರಿಸಿದ್ದು, ಗೃಹಸಚಿವರು ಹಾಗು ಮುಖ್ಯಮಂತ್ರಿ ಆದಿತ್ಯನಾಥ್ ಸ್ಥಳಕ್ಕೆ ಆಗಮಿಸಬೇಕು ಎಂದು ಧರಣಿ ಕೂತರು.

ಉತ್ತರ ಪ್ರದೇಶದ ಸಚಿವರುಗಳಾದ ಅನಿಲ್ ರಾಜ್ ಭರ್ ಹಾಗು ಜೈ ಪ್ರಕಾಶ್ ನಿಶಾದ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಮಂತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಯೋಧ ಚಂದನ್ ಕುಮಾರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News