ಜಾತಿ ಕಂದಾಚಾರವನ್ನು ವಿರೋಧಿಸಿದ ಮೂವರಿಗೆ ಮಾರಣಾಂತಿಕ ಹಲ್ಲೆ

Update: 2018-01-22 15:28 GMT

 ಹೊಸದಿಲ್ಲಿ,ಜ.22: ತಮ್ಮ ಜಾತಿ ಪಂಚಾಯತ್ ಅನುಸರಿಸುತ್ತಿದ್ದ ಕಂದಾಚಾರಗಳನ್ನು ವಿರೋಧಿಸಿದ್ದ ಮೂವರನ್ನು ಅವರದೇ ಸಮುದಾಯದ ಕೆಲವು ಮಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪುಣೆ ಸಮೀಪದ ಪಿಂಪ್ರಿ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ಮೂವರು ಸ್ಥಳೀಯ ಕಾಂಜಾರ್‌ಭಾಟ್ ಜಾತಿಗೆ ಸೇರಿದವರಾಗಿದ್ದು, ತಮ್ಮ ಸಮುದಾಯದಲ್ಲಿ ರೂಢಿಯಲ್ಲಿರುವ ವಿವಾಹದ ರಾತ್ರಿಯಂದು ವಧುವಿನ ಕನ್ಯತ್ವವನ್ನು ನಿರ್ಧರಿಸುವ ಆಚರಣೆಯ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ರಚನೆಯಾದ ‘ಸ್ಟಾಪ್ ವಿ ರಿಚುವಲ್’ ಎಂಬ ಹೆಸರಿನ ವಾಟ್ಸ್ಯಾಪ್ ಗ್ರೂಪ್‌ನ ಅಂಗವಾಗಿದ್ದರು.

  ಪಿಂಪ್ರಿಯಲ್ಲಿರುವ ತಮ್ಮ ಸಂಬಂಧಿಕರೊಬ್ಬರ ವಿವಾಹದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಈ ಮೂವರು ತೆರಳಿದ್ದಾಗ, ಸಮುದಾಯದ ಸುಮಾರು 40 ಮಂದಿ ಸದಸ್ಯರು ಅವರಿಗೆ ಥಳಿಸಿದರೆನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಇಂದು ಬೆಳಗ್ಗೆ ಇಬ್ಬರನ್ನು ಬಂಧಿಸಲಾಗಿದೆ ಯೆಂದು ಪಿಂಪ್ರಿ ಠಾಣಾ ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಸ್ವಯಂಪ್ರೇರಿತ ಹಲ್ಲೆ, ಕಾನೂನುಬಾಹಿರವಾಗಿ ಗುಂಪು ಸೇರಿರುವುದು ಹಾಗೂ ಗಲಭೆಯಲ್ಲಿ ತೊಡಗಿರುವ ಆರೋಪಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

  ಕನ್ಯತ್ವ ಪರೀಕ್ಷೆ, ಮದುವೆಗೆ ಅನುಮೋದನೆ ನೀಡಲು ಹಣ ಕೇಳುವುದು ಇತ್ಯಾದಿ ಕಂದಾಚಾರಗಳನ್ನು ತಮ್ಮ ಜಾತಿ ಪಂಚಾಯತ್ ಅನುಸರಿಸುತ್ತಿದ್ದುದಾಗಿ ಹಲ್ಲೆಗೊಳಗಾದವರೊಬ್ಬರ ಸಹೋದರ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News