ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿ ಹಿಂಪಡೆದ ಆಪ್ ಶಾಸಕರು

Update: 2018-01-22 16:07 GMT

ಹೊಸದಿಲ್ಲಿ, ಜ.22: ಲಾಭದಾಯಕ ಹುದ್ದೆಯನ್ನು ಸ್ವೀಕರಿಸಿದ ಕಾರಣಕ್ಕೆ ಶಾಸಕತ್ವದಿಂದ ಅನರ್ಹಗೊಳಿಸಲ್ಪಟ್ಟಿರುವ ಆಮ್ ಆದ್ಮಿ ಪಕ್ಷದ 20 ಶಾಸಕರು ಚುನಾವಣಾ ಆಯೋಗದ ಶಿಫಾರಸನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ತಾವು ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಪಡೆದಿದ್ದಾರೆ. ಸಂಸದೀಯ ಕಾರ್ಯದರ್ಶಿ ಪದವಿಯನ್ನು ಸ್ವೀಕರಿಸಿದ್ದ 20 ಆಪ್ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗವು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿತ್ತು. ಆಯೋಗದ ಈ ನಡೆಯನ್ನು ಶಾಸಕರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ಇದೀಗ ಆಯೋಗದ ಶಿಫಾರಸಿಗೆ ರಾಷ್ಟ್ರಪತಿಗಳು ತಮ್ಮ ಅಂಕಿತ ಹಾಕಿರುವ ಕಾರಣ ಹಿಂದೆ ಸಲ್ಲಿಸಲಾದ ಮೇಲ್ಮನವಿಯು ಅನೂರ್ಜಿತವಾಗುವ ಕಾರಣ ಹೊಸ ಮೇಲ್ಮನವಿಯನ್ನು ಸಲ್ಲಿಸಲಾಗುವುದು ಎಂದು ಅನರ್ಹಗೊಳಿಸಲ್ಪಟ್ಟ ಶಾಸಕರು ತಿಳಿಸಿದ್ದಾರೆ.

ನ್ಯಾಯಾಧೀಶರಾದ ರೇಖಾ ಪಳ್ಳಿ ಶಾಸಕರು ತಮ್ಮ ಅರ್ಜಿಗಳನ್ನು ಹಿಂಪಡೆಯಲು ಅನುಮತಿ ನೀಡಿದರು. ದಿಲ್ಲಿಯ ಆಪ್ ಸರಕಾರದಲ್ಲಿ 21 ಶಾಸಕರು ಲಾಭದಾಯಕ ಹುದ್ದೆಯಾದ ಸಂಸದೀಯ ಕಾರ್ಯದರ್ಶಿಗಳಾಗಿ ನಿಯುಕ್ತಿಗೊಂಡಿದ್ದಾರೆ ಎಂದು ಆರೋಪಿಸಿ ಪ್ರಶಾಂತ್ ಪಟೇಲ್ ಎಂಬವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News