ಸಿಜೆಐ ವಾಗ್ದಂಡನೆ ನಿಲುವಳಿಗೆ ಸಿಪಿಎಂ ಯತ್ನ

Update: 2018-01-24 05:01 GMT
ಸೀತಾರಾಂ ಯಚೂರಿ

ಹೊಸದಿಲ್ಲಿ, ಜ. 24: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಪದಚ್ಯುತಗೊಳಿಸುವ ಸಂಬಂಧ ಮುಂದಿನ ಬಜೆಟ್ ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸುವ ಸಾಧ್ಯತೆ ಬಗ್ಗೆ ಸಿಪಿಐ(ಎಂ) ವಿರೋಧ ಪಕ್ಷಗಳ ಜತೆ ಮಾತುಕತೆ ಆರಂಭಿಸಿದೆ. ಇದರಿಂದಾಗಿ ಸಿಜೆಐ ಹಾಗೂ ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನಡುವಿನ ಹಗ್ಗಜಗ್ಗಾಟಕ್ಕೆ ರಾಜಕೀಯ ಬಣ್ಣ ಹಚ್ಚಿದಂತಾಗಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಈ ಪ್ರಯತ್ನದ ಮುಂಚೂಣಿಯಲ್ಲಿದ್ದು, ಮಂಗಳವಾರ ಹಲವು ವಿರೋಧ ಪಕ್ಷಗಳ ಮುಖಂಡರ ಜತೆ ಚರ್ಚೆ ನಡೆಸಿದರು.

ಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶರು ಎತ್ತಿರುವ ವಿಷಯಗಳ ಬಗ್ಗೆ ಈ ಮುಖಂಡರು ಕಳವಳ ವ್ಯಕ್ತಪಡಿಸಿದರು. ಜನವರಿ 12ರಂದು ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ, ಸೂಕ್ಷ್ಮ ಹಾಗೂ ಪ್ರಮುಖ ಪ್ರಕರಣಗಳ ಹಂಚಿಕೆ ಸೇರಿದಂತೆ ಸಿಜೆಐ ಆಡಳಿತ ವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಈ ವಿವಾದ ಇನ್ನೂ ತಣ್ಣಗಾಗಿಲ್ಲ. ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ, ಲೋಕೂರ ಹಾಗೂ ಕುರಿಯನ್ ಜೋಸೆಫ್ ಅವರು, ಸಿಜೆಐ ಜತೆಗೆ ವಿಷಯ ಚರ್ಚಿಸಿದ್ದರೂ ಬಗೆಹರಿದಿಲ್ಲ ಎಂದು ಯಚೂರಿ ಹೇಳಿದ್ದಾರೆ.

"ನ್ಯಾಯಾಂಗ ವ್ಯವಸ್ಥೆಯೊಳಗೇ ಇದು ಬಗೆಹರಿಯಬೇಕು ಎಂಬ ಆಶಯ ನಮ್ಮದು. ನಮ್ಮ ಪ್ರಜಾಪ್ರಭುತ್ವದ ಅಡಿಗಲ್ಲನ್ನು ಬಲಗೊಳಿಸುವುದು ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ಸಂಘಟಿತ ಜವಾಬ್ದಾರಿ. ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಯಾವ ರಾಜಿಯೂ ಇಲ್ಲ. ಶಾಸಕಾಂಗಕ್ಕೆ ಇರುವ ಏಕೈಕ ಮಾರ್ಗವೆಂದರೆ ಸಂವಿಧಾನಾತ್ಮಕವಾಗಿ ವಾಗ್ದಂಡನೆ ನಿಲುವಳಿ ಮಂಡಿಸುವುದು" ಎಂದು ಯಚೂರಿ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಎನ್‌ಸಿಪಿ ನಾಯಕ ತಾರಿಕ್ ಅನ್ವರ್ ಹಾಗೂ ಜೆಡಿಯು ಮುಖಂಡ ಶರದ್ ಯಾದವ್ ಜತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News