ರಾಹುಲ್ ಗಾಂಧಿ ಭೇಟಿ ನೀಡುವ ಜಿಲ್ಲೆಗಳಲ್ಲಿ ಬಂದ್‍ಗೆ ಕರೆ ಕೊಡ್ತೀವಿ :ಯಡಿಯೂರಪ್ಪ

Update: 2018-01-24 12:50 GMT

ಮಡಿಕೇರಿ, ಜ.24 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಅವರು ಜ.25 ರಂದು ಮೈಸೂರಿಗೆ ಹಾಗೂ ಪ್ರಧಾನಿ ನರೇಂದ್ರಮೋದಿ ಅವರು ಫೆ.4 ರಂದು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಕರ್ನಾಟಕ ಬಂದ್‍ಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡುವ ಜಿಲ್ಲೆಗಳಲ್ಲಿ ಬಿಜೆಪಿ ಬಂದ್‍ಗೆ ಕರೆ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಗಾಂಧಿ ಮೈದಾನದಲ್ಲಿ ನಡೆದ ಬಿಜೆಪಿ ‘ಪರಿವರ್ತನಾ ಯಾತ್ರೆ’ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ.25 ರಂದು ಕರ್ನಾಟಕ ಬಂದ್‍ ಅನ್ನು ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ವಿವಿಧ ಸಂಘಟನೆಗಳ ಮೂಲಕ ನಡೆಸಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಫೆ.4 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಂತದಲ್ಲೂ ಬಂದ್ ನಡೆಸುವ ಕುತಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ. ಹಾಗೇನಾದರು ಕಾಂಗ್ರೆಸ್ ನಡೆದುಕೊಂಡಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಯಾವುದೇ ಜಿಲ್ಲೆಗೆ ಭೇಟಿ ನೀಡಿದರೂ ಅಲ್ಲಿ ಬಿಜೆಪಿ ಬಂದ್ ಮತ್ತು ಪ್ರತಿಭಟನೆ ನಡೆಸಲಿದೆ ಎಂದರು.

ಮೈಸೂರಿನಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅನಗತ್ಯ ಕಿರುಕುಳ ನೀಡುವ ಉದ್ದೇಶದಿಂದ ಪರೋಕ್ಷವಾಗಿ ಬಂದ್ ಕರೆಯನ್ನು ನೀಡುವ ಕಾರ್ಯವನ್ನು ಕಾಂಗ್ರೆಸ್ ವಿವಿಧ ಸಂಘಸಂಸ್ಥೆಗಳ ಮೂಲಕ ಮಾಡಿದೆ. ಆದರೆ, ಮೈಸೂರಿನ ಪರಿವರ್ತನಾ ಯಾತ್ರೆ ಲಕ್ಷಾಂತರ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಯಡಿಯೂರಪ್ಪ ತಿಳಿಸಿದರು. 

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಜೆಟ್ ಮಂಡನೆಗೆ ಯಾವುದೇ ಅವಕಾಶವಿಲ್ಲ. ಬೇಕಾಬಿಟ್ಟಿಯಾಗಿ ಬಜೆಟ್ ಮಂಡನೆಗೆ  ಸಿದ್ದರಾಮಯ್ಯ ಮುಂದಾದಲ್ಲಿ ಅದಕ್ಕೆ ಕಾನೂನಿನಲ್ಲಿಯೂ ಅವಕಾಶವಿಲ್ಲವೆಂದು ಹೇಳಿದರು. ತರಾತುರಿಯ ಕಾಮಗಾರಿಗಳ ಮೂಲಕ ಹಳೆಕಲ್ಲಿಗೆ ಹೊಸಬಿಲ್ಲು ತೋರಿಸಲು ಸರಕಾರ ಮುಂದಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News