13 ಪೆಲೆಟ್ ಗನ್ ಸಂತ್ರಸ್ತರಿಗೆ ಸರಕಾರಿ ಉದ್ಯೋಗ: ಕಾಶ್ಮೀರ ಸಚಿವ

Update: 2018-01-24 18:06 GMT

ಜಮ್ಮು, ಜ.24: ಜಮ್ಮು-ಕಾಶ್ಮೀರದಲ್ಲಿ 2016ರಲ್ಲಿ ನಡೆದ ಹಿಂಸಾಚಾರದಲ್ಲಿ ಪೆಲೆಟ್ ಗನ್‌ನಿಂದ ಗಾಯಾಳುಗಳಾಗಿರುವ 13 ಮಂದಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ನೀಡಲಾಗಿದೆ ಎಂದು ವಿಧಾನಪರಿಷತ್‌ನಲ್ಲಿ ಕಂದಾಯ ಸಚಿವ ಅಬ್ದುಲ್ ರೆಹ್ಮಾನ್ ವೀರಿ ತಿಳಿಸಿದ್ದಾರೆ.

ಅಲ್ಲದೆ 22 ಮಂದಿ ಪೆಲೆಟ್ ಗನ್ ಗಾಯಾಳುಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಒದಗಿಸಲಾಗಿದೆ. ರಾಜ್ಯದಲ್ಲಿ ಜುಲೈ-ನವೆಂಬರ್ ಅವಧಿಯಲ್ಲಿ ನಡೆದ ಹಿಂಸಾಚಾರದಲ್ಲಿ ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದವರನ್ನು ಗುರುತಿಸುವ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಲಾಗಿದೆ. ಕಾಶ್ಮೀರದ ವಿಭಾಗೀಯ ಆಯುಕ್ತರು ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂದು ವಿಧಾನಪರಿಷತ್‌ನಲ್ಲಿ ಆಲಿ ಮುಹಮ್ಮದ್ ದಾರ್ ಮತ್ತು ಶೌಕತ್ ಹುಸೈನ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ತಿಳಿಸಿದರು.

ಪ್ರಥಮ ಹಂತದಲ್ಲಿ ಪರಿಹಾರ ಪಡೆಯಲು ಸಮಿತಿ ಶಿಫಾರಸು ಮಾಡಿರುವ 54 ಪ್ರಕರಣಗಳಿಗೆ ಸರಕಾರ ಪರಿಹಾರ ಮಂಜೂರುಗೊಳಿಸಿದೆ. ಇನ್ನೂ 10 ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News