ಸಿಜೆಐ ವಾಗ್ದಂಡನೆಗೆ ಕಾಂಗ್ರೆಸ್ ಬೆಂಬಲ?

Update: 2018-01-25 04:28 GMT

ಹೊಸದಿಲ್ಲಿ, ಜ.25: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾವಿರುದ್ಧ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ವಾಗ್ದಂಡನೆ ನಿರ್ಣಯವನ್ನು ಬೆಂಬಲಿಸುವ ಇಂಗಿತವನ್ನು ಕಾಂಗ್ರೆಸ್ ವ್ಯಕ್ತಪಡಿಸುವುದರೊಂದಿಗೆ ವಿರೋಧ ಪಕ್ಷಗಳ ನಡೆಗೆ ಉತ್ತೇಜನ ಸಿಕ್ಕಿದಂತಾಗಿದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ವಾಗ್ದಂಡನೆ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಪ್ರಮುಖ ಪ್ರಕರಣಗಳ ಹಂಚಿಕೆ ಸೇರಿದಂತೆ, ಸಿಜೆಐ ಕಾರ್ಯನಿರ್ವಹಣೆ ಬಗ್ಗೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಈ ವಾಗ್ದಂಡನೆ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಮುಂದಾಗಿವೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಎನ್‌ಸಿಪಿ ಮುಖಂಡ ತಾರಿಕ್ ಅನ್ವರ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಬೆಂಬಲ ಕ್ರೋಢೀಕರಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ಅಧಿಕೃತವಾಗಿ ತನ್ನ ಬೆಂಬಲ ಘೋಷಿಸಿಲ್ಲವಾದರೂ, ವಾರಾಂತ್ಯದಲ್ಲಿ ನಡೆಯುವ ಪಕ್ಷದ ವರಿಷ್ಠರ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ ಬಳಿಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದರು. ಈ ನಿಗೂಢ ಸಾವಿನ ಪ್ರಕರಣದ ಹಂಚಿಕೆ ಬಗ್ಗೆ ಸಿಜೆಐ ವಿರುದ್ಧ ನಾಲ್ವರು ನ್ಯಾಯಮೂರ್ತಿಗಳು ಬಂಡಾಯ ಎದ್ದಿದ್ದರು.

ನ್ಯಾಯಾಧೀಶರು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಾಜ್ಯ ಪರಿಹಾರಕ್ಕೆ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ವಾಗ್ದಂಡನೆ ನಿರ್ಣಯಕ್ಕೆ ಬೆಂಬಲ ಸೂಚಿಸಲು ಪಕ್ಷ ಮುಂದಾಗಬಹುದು ಎಂದು ಉನ್ನತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News