ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮಗೊಳಿಸುವ ಅಗತ್ಯವಿದೆ: ವೆಂಕಯ್ಯ ನಾಯ್ಡು

Update: 2018-01-25 15:42 GMT

ಲಕ್ನೊ, ಜ.25: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಉತ್ತಮಗೊಳಿಸುವ ಅಗತ್ಯವಿದೆ ಎಂದು ತಿಳಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಸಮಸ್ಯೆಗೆ ಮೂಲ ಕಾರಣವಾದ ಅಕ್ರಮ ಶಸ್ತ್ರಾಸ್ತ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಸೂಚಿಸಿದ್ದಾರೆ. ಗುರುವಾರದಂದು ಅವದ್‌ನ ಶಿಲ್ಪ್ ಗ್ರಾಮದಲ್ಲಿ ಉತ್ತರ ಪ್ರದೇಶ ದಿವಸ್ ಅನ್ನು ಉದ್ಘಾಟಿಸಿದ ವೆಂಕಯ್ಯ ನಾಯ್ಡು ಅವರು, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಉತ್ತಮಗೊಳಿಸಬೇಕಿದೆ. ಬಹಳಷ್ಟು ಜನರ ಕೈಯಲ್ಲಿ ಅನಧಿಕೃತ ಶಸ್ತ್ರಗಳಿವೆ. ಅವರಿಗೆ ಅದರ ಅಗತ್ಯವಾದರೂ ಏನು? ಎಮದು ಪ್ರಶ್ನಿಸಿದ್ದಾರೆ. ಈ ವೇಳೆ ಅವರ ಜೊತೆ ರಾಜ್ಯಪಾಲರಾದ ರಾಮ್ ನಾಕ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

ಭಾರತವು ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿದೆ. ಉತ್ತರ ಪ್ರದೇಶ ಕೂಡಾ ಈ ನಿಟ್ಟಿನಲ್ಲಿ ಮುನ್ನಡೆಯಬೇಕಿದೆ. ಇತ್ತೀಚಿನ ಕೆಲವು ಅಪರಾಧಿ ಕೃತ್ಯಗಳಿಗೆ ಅಕ್ರಮ ಶಸ್ತ್ರಾಸ್ತ್ರಗಳೇ ಕಾರಣ. ಉತ್ತರ ಪ್ರದೇಶ ಆರು ರಾಜ್ಯಗಳಿಗೆ ಸಮನಾಗಿರುವುದರಿಂದ ಅದನ್ನು ನಿಬಾಯಿಸುವುದು ಸುಲಭವಲ್ಲ. ಆದರೆ ಕಾನೂನು ಪರಿಪಾಲನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಹೇಳಿದರು.

ಉತ್ತರ ಪ್ರದೇಶ ದಿವಸ್ ಅನ್ನು ಆಯೋಜಿಸಿದ ಮುಖ್ಯಮಂತ್ರಿಯನ್ನು ಶ್ಲಾಘಿಸಿದ ನಾಯ್ಡು ರಾಜ್ಯದಲ್ಲಿ ಆದಿತ್ಯನಾಥ್ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

24 ರಾಜ್ಯಗಳು ತಾವು ಅಸ್ತಿತ್ವಕ್ಕೆ ಬಂದ ದಿನವನ್ನು ಆಚರಿಸುತ್ತಿದೆ ಹಾಗಾಗಿ ನಾವು ಕೂಡಾ ಈ ಸಂಪ್ರದಾಯವನ್ನು ಹುಟ್ಟುಹಾಕಬೇಕು ಎನ್ನುವ ರಾಜ್ಯಪಾಲರ ಸಲಹೆಗೆ ಸ್ಪಂದಿಸಿದ ಆದಿತ್ಯನಾಥ್ ಉತ್ತರ ಪ್ರದೇಶ ರೂಪುಗೊಂಡ 68ನೇ ವರ್ಷವನ್ನು ಉತ್ತರ ಪ್ರದೇಶ ದಿವಸ್ ಎಂದು ಆಚರಿಸುವ ನಿರ್ಧಾರಕ್ಕೆ ಬಂದಿದ್ದರು ಎಂದು ಕೆಲವು ಆಂಗ್ಲ ಪತ್ರಿಕೆಗಳು ವರದಿ ಮಾಡಿದ್ದವು.

1950ರ ಜನವರಿ 24ರಂದು ಅಂದು ಸಂಯಕ್ತ ಪ್ರಾಂತ್ಯಗಳು ಎಂದು ಕರೆಯಲಾಗುತ್ತಿದ್ದ ಪ್ರದೇಶವನ್ನು ಅಂದಿನ ರಾಜ್ಯಪಾಲರ ಸೂಚನೆಯ ಮೇರೆಗೆ ಉತ್ತರ ಪ್ರದೇಶ ಎಂದು ಮರುನಾಮಕರಣ ಮಾಡಲಾಯಿತು.

ಫೆಬ್ರವರಿ 21-22ರಂದು ಲಕ್ನೊದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಹೂಡಿಕೆದಾರರ ಸಮ್ಮೇಳನದಲ್ಲಿ ರಾಜ್ಯಕ್ಕೆ ಮೂರು ಲಕ್ಷ ಕೋಟಿ ರೂ. ಹೂಡಿಕೆಯನ್ನು ತರಲಾಗುವುದು. ಮುಂದಿನ ಮಾರ್ಚ್‌ನಲ್ಲಿ ಪ್ರಧಾನಿ ಮೋದಿಯವರು ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. 24 ತಿಂಗಳಲ್ಲಿ ಈ ಕಾಮಗಾರಿಯನ್ನು ಸಂಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News