ಕರ್ನಾಟಕದ ಸೂಲಗಿತ್ತಿ ನರಸಮ್ಮ ಸಹಿತ 85 ಗಣ್ಯರಿಗೆ ಪದ್ಮ ಪ್ರಶಸ್ತಿ

Update: 2018-01-25 17:04 GMT
ಸೂಲಗಿತ್ತಿ ನರಸಮ್ಮ

ಹೊಸದಿಲ್ಲಿ, ಜ. 25: ಕರ್ನಾಟಕದ ಸೂಲಗಿತ್ತಿ ನರಸಮ್ಮ, ಮಹಿಳಾ ಸಶಕ್ತೀಕರಣದ ಸೀತವ್ವ ಜೋಡ್ಡತ್ತಿ, ಸೂಫಿ ಹಾಡುಗಾರ ಇಬ್ರಾಹಿಂ ಸುತರ್‌ಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಒಟ್ಟು 85 ಮಂದಿಗೆ ಕೇಂದ್ರ ಸರಕಾರ ಗುರುವಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ.

ಇದರಲ್ಲಿ ಮೂವರು ಪದ್ಮವಿಭೂಷಣ, 9 ಮಂದಿ ಪದ್ಮಭೂಷಣ ಹಾಗೂ 73 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ವೈಜ್ಞಾನಿಕ ಆಟಿಕೆಗಳ ತಯಾರಕ ಅರವಿಂದ ಗುಪ್ತಾ, ನಾಟಿ ವೈದ್ಯೆ ಲಕ್ಷ್ಮೀಕುಟ್ಟಿ, ಗೊಂಡ ಕಲಾವಿದ ಭಜ್ಜು ಶ್ಯಾಮ್, 98ರ ಹರೆಯದ ಸಾಮಾಜಿಕ ಕಾರ್ಯಕರ್ತ ಸುಧಾಂಶು ಬಿಸ್ವಾಸ್ ಹಾಗೂ ಭಾರತದ ಉಪಶಾಮಕ ಆರೈಕೆಯ ಪಿತ ಎಂ.ಆರ್. ರಾಜಗೋಪಾಲ್ ಸೇರಿದ್ದಾರೆ.

ಅಲ್ಲದೆ ಸಾಮಾಜಿಕ ಹೋರಾಟಗಾರ್ತಿ ರಾಣಿ ಹಾಗೂ ಅಭಯ್ ಬಾಂಗ್, ಸಾಮಾಜಿಕ ಕಾರ್ಯಕರ್ತ ಲೆಂಟಿನಾ ಆವೊ ಥಕ್ಕರ್, ವನ್ಯಜೀವಿ ಸಂರಕ್ಷಕ ರೋಮುಲಸ್ ವಿಟ್ಕರ್, ಸಂಪತ್ ರಾಮ್‌ಟೆಕೆ, ಸಂದುಕ್ ಕೂಡ ಸೇರಿದ್ದಾರೆ.

ಭಾರತದ ಮೊದಲ ಪ್ಯಾರಾ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಪಡೆದ ಮುರಳಿಕಾಂತ್ ಪೆಟ್ಕರ್, ಪ್ಲಾಸ್ಟಿಕ್ ರಸ್ತೆ ನಿರ್ಮಿಸಿದ ರಾಜಗೋಪಾಲನ್ ವಾಸುದೇವನ್, ಬಡವರಿಗಾಗಿ ಆಸ್ಪತ್ರೆ ನಿರ್ಮಿಸಿದ ಸುಭಾಷಿಣಿ ಮಿಸ್ತ್ರಿ, ತಮಿಳು ಜಾನಪದ ಕಲಾವಿದೆ ವಿಜಯಲಕ್ಷ್ಮೀ, ಬೌದ್ಧ ವೈದ್ಯ ಯೆಶಿ ಧೋಡೆನ್ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News