ಗಣರಾಜ್ಯೋತ್ಸವ ಸಂದೇಶದಲ್ಲಿ ರಾಷ್ಟ್ರಪತಿಯಿಂದ ಕರ್ಣಿ ಸೇನೆಗೆ ಉಪದೇಶ

Update: 2018-01-26 09:10 GMT

ಹೊಸದಿಲ್ಲಿ,ಜ.26 : ಗಣರಾಜ್ಯೋತ್ಸವ ದಿನದ ಮುನ್ನಾದಿನವಾದ ಗುರುವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ‘ಪದ್ಮಾವತ್’ ಚಲನಚಿತ್ರದ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಸೂಚ್ಯವಾಗಿ ಉಲ್ಲೇಖಿಸುತ್ತಾ “ಜನರು ಐತಿಹಾಸಿಕ ಘಟನೆ ಅಥವಾ ಯಾವುದರ ವಿರುದ್ಧವೂ ಅಸಮ್ಮತಿ ಸೂಚಿಸಬಹುದಾದರೂ ಅದು ಇನ್ನೊಬ್ಬರ ಗೌರವಕ್ಕೆ ಹಾಗೂ ಇತರರಿಗೆ ತೊಂದರೆಯುಂಟು ಮಾಡಬಾರದು'' ಎಂದು ಹೇಳಿದ್ದಾರೆ.

“ಉತ್ತಮ ನಾಗರಿಕತೆಯಿರುವ ದೇಶವೊಂದರ ಜನರು ತಮ್ಮ ನೆರೆಮನೆಯವರ ಖಾಸಗಿತನ ಹಾಗೂ ಹಕ್ಕುಗಳನ್ನು ಗೌರವಿಸಬೇಕು. ನಾವು ಹಬ್ಬವನ್ನು ಆಚರಿಸುವಾಗ ಅಥವಾ ಪ್ರತಿಭಟನೆ ನಡೆಸುವಾಗ ನಮ್ಮ ನೆರೆಯವರಿಗೆ ಯಾವುದೇ ಸಂದರ್ಭದಲ್ಲೂ ಅನಾನುಕೂಲತೆ ಸೃಷ್ಟಿಸಬಾರದು'' ಎಂದು ಅವರು ಹೇಳಿದರು.

ಬುಧವಾರ ಕರ್ನಿ ಸೇನಾ ಸದಸ್ಯರು ಗುರುಗ್ರಾಮದಲ್ಲಿ ಶಾಲಾ ಬಸ್ ಒಂದರ ಮೇಲೆ  ನಡೆಸಿದ ದಾಳಿಯ ನಂತರ ಸರಕಾರದ ವತಿಯಿಂದ  ‘ಪದ್ಮಾವತ್’ ಪ್ರತಿಭಟನೆಗಳ ಬಗ್ಗೆ ಪ್ರಥಮ ಬಾರಿಗೆ ರಾಷ್ಟ್ರಪತಿಗಳಿಂದ  ಒಂದು ಪ್ರತಿಕ್ರಿಯೆ ಬಂದಂತಾಗಿದೆ.

ಪ್ರತಿಭಟನೆಗಳ ಹಿನ್ನೆಲೆಯಲ್ಲಿ ‘ಪದ್ಮಾವತ್’ ಚಿತ್ರವು ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ, ಗೋವಾ ರಾಜ್ಯಗಳಲ್ಲಿ ಬಿಡುಗಡೆಗೊಂಡಿಲ್ಲದೇ ಇದ್ದರೂ  ಸುಮಾರು 10 ಲಕ್ಷ ಜನ ದೇಶದ ಇತರೆಡೆಗಳ 4000 ಚಿತ್ರಮಂದಿರಗಳಲ್ಲಿ ಗುರುವಾರ ಚಿತ್ರವನ್ನು ವೀಕಿಸಿದ್ದಾರೆ.

ಪ್ರತಿಯೊಬ್ಬರೂ ದೇಶದ ಗಣತಂತ್ರದ ಆಧಾರ ಸ್ಥಂಭಗಳು ಎಂದು ಹೇಳಿದ ರಾಷ್ಟ್ರಪತಿಗಳು, ಎಲ್ಲಾ ಸಂಸ್ಥೆಗಳೂ ಶಿಸ್ತುಬದ್ಧವಾಗಿ ಹಾಗೂ ನೈತಿಕತೆಯ ತಳಹದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News