"ಶಾಲಾ ಮಕ್ಕಳ ಬಸ್ ಗೆ ಕಲ್ಲೆಸೆತ ಪ್ರಕರಣದಲ್ಲಿ ಯಾವೊಬ್ಬ ಮುಸ್ಲಿಮನೂ ಭಾಗಿಯಾಗಿಲ್ಲ"

Update: 2018-01-26 09:39 GMT

ಹೊಸದಿಲ್ಲಿ, ಜ.26: ಮಕ್ಕಳಿದ್ದ ಶಾಲಾ ಬಸ್ ಗೆ ಕಲ್ಲೆಸೆದ ಪ್ರಕರಣದಲ್ಲಿ ಯಾವೊಬ್ಬ ಮುಸ್ಲಿಮ್ ಯುವಕನೂ ಭಾಗಿಯಾಗಿಲ್ಲ ಎಂದು ಗುರುಗ್ರಾಮ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ‘ಪದ್ಮಾವತ್’ ಚಿತ್ರವನ್ನು ವಿರೋಧಿಸಿ ನಡೆದ ಹಿಂಸಾಚಾರದ ಸಂದರ್ಭ ಮಕ್ಕಳು ತುಂಬಿದ್ದ ಶಾಲಾ ಬಸ್ಸೊಂದಕ್ಕೆ ದುಷ್ಕರ್ಮಿಗಳು ಕಲ್ಲೆಸೆದಿದ್ದರು. ಈ ಕೃತ್ಯ ಎಸಗಿದ್ದು ಮುಸ್ಲಿಮ್ ಯುವಕರು ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಪೊಲೀಸರು ಮುಸ್ಲಿಮರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

“ಹರ್ಯಾಣ ಸಾರಿಗೆ ಹಾಗು ಶಾಲಾ ಬಸ್ ಮೇಲಿನ ದಾಳಿ ಪ್ರಕರಣಗಳಿಗೆ ಸಂಬಂಧಿಸಿ ಮುಸ್ಲಿಮ್ ಯುವಕರನ್ನು ಬಂಧಿಸಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತೇವೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಪದ್ಮಾವತ್’ ಬಿಡುಗಡೆಯನ್ನು ವಿರೋಧಿಸಿ ದೇಶಾದ್ಯಂತ ಹಲವೆಡೆ ಹಿಂಸಾಚಾರಗಳು ನಡೆದಿತ್ತು. ಸುಮಾರು 50 ಮಂದಿಯ ತಂಡವೊಂದು ಮಕ್ಕಳಿದ್ದಾರೆ ಎನ್ನುವುದನ್ನೂ ಲೆಕ್ಕಿಸದೆ ಶಾಲಾ ಬಸ್ ಮೇಲೆ ಇಟ್ಟಿಗೆ, ಕಲ್ಲುಗಳಿಂದ ದಾಳಿ ನಡೆಸಿದ್ದರು. ದಾಳಿಯಿಂದ ಹೆದರಿದ ಮಕ್ಕಳು ಬಸ್ ಸೀಟಿನಡಿ ಕುಳಿತು ಅಳುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಈ ಘಟನೆಗೆ ಸಂಬಂಧಿಸಿ ಗುರುಗ್ರಾಮ ಪೊಲೀಸರು 23 ಮಂದಿಯನ್ನು ಬಂಧಿಸಿದ್ದಾರೆ. ಗಲಭೆ ಹಾಗು ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವರಲ್ಲಿ 8 ಮಂದಿ ಅಪ್ರಾಪ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News