ಲಂಡನ್: ಕಾಶ್ಮೀರದ ಸ್ವಾತಂತ್ರ್ಯಕ್ಕೆ ಕರೆ ನೀಡಿದ ಬ್ರಿಟನ್ ರಾಜಕಾರಣಿ ವಿರುದ್ಧ ಪ್ರತಿಭಟನೆ

Update: 2018-01-27 14:22 GMT

ಹೊಸದಿಲ್ಲಿ, ಜ.27: ಭಾರತದ 69ನೇ ಗಣರಾಜ್ಯೋತ್ಸವದ ಸಂದರ್ಭ ಗುರುವಾರ ಲಂಡನ್‌ನಲ್ಲಿ ‘ಭಾರತ ಕಾಶ್ಮೀರ ಬಿಟ್ಟು ತೊಲಗಲಿ’ ಎಂಬ ಅಭಿಯಾನದ ನೇತೃತ್ವ ವಹಿಸಿದ್ದ ಪಾಕ್ ಮೂಲದ ಬ್ರಿಟನ್ ರಾಜಕಾರಣಿ, ಬ್ರಿಟಿಷ್ ಹೌಸ್ ಆಫ್ ಲಾರ್ಡ್ಸ್‌ನ ಸದಸ್ಯ ನಝೀರ್ ಅಹ್ಮದ್ ವಿರುದ್ಧ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಭಾಗದಲ್ಲಿ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ.

 ‘ಭಾರತ ಕಾಶ್ಮಿರ ಬಿಟ್ಟು ತೊಲಗಲಿ’ ಅಭಿಯಾನದ ಅಂಗವಾಗಿ ಕಪ್ಪು ದಿನಾಚರಣೆ ಆಚರಿಸುವಂತೆ ಬೆಂಬಲಿಗರಿಗೆ ಅಹ್ಮದ್ ಕರೆ ನೀಡಿದ್ದರು. ಇದನ್ನು ಖಂಡಿಸಿದ ಭಾರತೀಯರು , ನಝೀರ್ ಅಹ್ಮದ್ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

 ಇದು ಕಳಂಕಿತ ರಾಜಕಾರಣಿಯ ಹತಾಶ ಯತ್ನ ಎಂದು ಲಂಡನ್‌ನ ಭಾರತೀಯ ಹೈಕಮಿಷನ್ ಬಣ್ಣಿಸಿದೆ. ಜನಾಂಗೀಯವಾದಕ್ಕೆ ಬೆಂಬಲ ನೀಡಿದ ವಿವಾದದ ಬಳಿಕ ನಝೀರ್‌ರನ್ನು 2013ರಲ್ಲಿ ಲೇಬರ್ ಪಕ್ಷದಿಂದ ಉಚ್ಛಾಟಿಸಲಾಗಿದೆ.

  ‘ಚಲೋ ಇಂಡಿಯಾ ಹೌಸ್’ ಪ್ರತಿಭಟನೆ ಹಮ್ಮಿಕೊಂಡಿದ್ದ ಪ್ರತಿಭಟನಾಕಾರರು ಮಾತನಾಡಿ, ಭಾರತ ಶಾಂತಿ ಸೌಹಾರ್ದತೆಗೆ ಬೆಂಬಲ ನೀಡಿದರೆ ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಈ ಸಂದರ್ಭ ಸುದ್ದಿಸಂಸ್ಥೆಯ ಜತೆ ಮಾತನಾಡಿದ ಪ್ರತಿಭಟನಾಕಾರರು, ಲಾರ್ಡ್ ನಝೀರ್ ನಮ್ಮ ರಾಷ್ಟ್ರದ ಜಮ್ಮು-ಕಾಶ್ಮೀರ ರಾಜ್ಯದ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದ್ದಾರೆ. ಆದರೆ ನಾವು ಪಾಕ್ ಪ್ರಾಯೋಜಿತ ಭಯೋತ್ಪಾದನೆ, ಕದನವಿರಾಮ ಉಲ್ಲಂಘನೆ ಹಾಗೂ ಅವರ ಛಾಯಾ ಸಮರದಿಂದ ಸ್ವಾತಂತ್ರ ಬೇಕೆಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

 ಭಾರತೀಯ ಹೈಕಮಿಷನ್ ಕಟ್ಟಡದ ಹೊರಭಾಗದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ನೇತೃತ್ವ ವಹಿಸಿದ್ದರು. ನಝೀರ್ ಅಹ್ಮದ್ ಅವರ ಕಾರ್ಯಕ್ರಮಕ್ಕೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿರುವ ಭಾರತೀಯರನ್ನು ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಶ್ಲಾಘಿಸಿದ್ದಾರೆ. ‘ನಿಕೃಷ್ಟ , ನಗಣ್ಯ ಶಕ್ತಿಗಳು ಭಾರತದ ಚೈತನ್ಯವನ್ನು ನಿಗ್ರಹಿಸಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶದಿಂದ ಜಮ್ಮು-ಕಾಶ್ಮೀರದವರೆಗೆ, ನಾಗಾಲ್ಯಾಂಡ್‌ನಿಂದ ಕಛ್‌ವರೆಗೆ, ಪಂಜಾಬಿನಿಂದ ಕನ್ಯಾಕುಮಾರಿಯವರೆಗೆ ನಾವೆಲ್ಲಾ ಒಂದೇ ’ ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News