ಇಂದೋರ್ ನಲ್ಲಿ ಹಂದಿಜ್ವರಕ್ಕೆ ಮೊದಲ ಬಲಿ

Update: 2018-01-27 15:41 GMT

ಇಂದೋರ(ಮ.ಪ್ರ),ಜ.27: 36ರ ಹರೆಯದ ಮಹಿಳೆಯೋರ್ವಳು ಶುಕ್ರವಾರ ಹಂದಿಜ್ವರದಿಂದಾಗಿ ಸಾವನ್ನಪ್ಪಿದ್ದು, ಇದು 2018ರಲ್ಲಿ ನಗರದಲ್ಲಿ ಈ ಮಾರಣಾಂತಿಕ ಕಾಯಿಲೆಗೆ ಮೊದಲ ಬಲಿಯಾಗಿದೆ.

ಕಳೆದ 20 ದಿನಗಳಿಂದಲೂ ಎಚ್1ಎನ್1 ವೈರಸ್ ಜ್ವರದಿಂದ ಇಂದೋರ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿಯ ಕನದಿಯಾ ನಿವಾಸಿ ಮಹಿಳೆ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಆಕೆ ಸಂಧಿವಾತ ಮತ್ತು ಮಧುಮೇಹದಿಂದಲೂ ನರಳುತ್ತಿದ್ದಳು ಎಂದು ಸಮಗ್ರ ರೋಗ ನಿಗಾ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಆಶಾ ಪಂಡಿತ ತಿಳಿಸಿದರು.

ಜ.1ರಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 18 ರೋಗಿಗಳನ್ನು ಹಂದಿಜ್ವರ ತಪಾಸಣೆಗೆ ಒಳಪಡಿಸಲಾಗಿತ್ತು ಮತ್ತು ಈ ಮಹಿಳೆಯಲ್ಲಿ ಮಾತ್ರ ಪಾಸಿಟಿವ್ ಫಲಿತಾಂಶ ಕಂಡುಬಂದಿತ್ತು ಎಂದರು.

ಹಂದಿಜ್ವರ ಅತ್ಯಂತ ಸಾಂಕ್ರಾಮಿಕ ರೋಗವಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ತ್ವರಿತವಾಗಿ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು 2009ರಲ್ಲಿ ಇದನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News