ಆಕ್ಸ್‌ಫರ್ಡ್ ಡಿಕ್ಷನರಿಯ ‘ವರ್ಷದ ಹಿಂದಿ ಪದ’ವಾಗಿ ಆಯ್ಕೆಯಾದದ್ದು ಯಾವುದು ಗೊತ್ತಾ ?

Update: 2018-01-27 16:54 GMT

ಹೊಸದಿಲ್ಲಿ, ಜ.27: 2017ರ ಹಿಂದಿ ಪದ ಎಂಬ ಮಾನ್ಯತೆಯನ್ನು ‘ಆಧಾರ್’ ಪಡೆದುಕೊಂಡಿದೆ. ಜೈಪುರದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಆಕ್ಸ್‌ಫರ್ಡ್ ಡಿಕ್ಷನರಿ ಈ ಘೋಷಣೆ ಮಾಡಿದೆ. ಅಲ್ಲದೆ ಆಕ್ಸ್‌ಫರ್ಡ್ ಡಿಕ್ಷನರಿಯ ಪ್ರಪ್ರಥಮ ‘ವರ್ಷದ ಹಿಂದಿ ಪದ’ ವಾಗಿಯೂ ‘ಆಧಾರ್’ ಮಾನ್ಯತೆ ಪಡೆದಿದೆ.

ಕಳೆದ ವರ್ಷದಲ್ಲಿ ಅತ್ಯಧಿಕ ಗಮನ ಸೆಳೆದ ಪದವನ್ನು ‘ವರ್ಷದ ಹಿಂದಿ ಪದ’ವಾಗಿ ಮಾನ್ಯ ಮಾಡಲಾಗುತ್ತದೆ ಎಂದು ಆಕ್ಸ್‌ಫರ್ಡ್ ವಿವಿ ಮುದ್ರಣಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಿಂದಿ ಭಾಷೆಯಲ್ಲಿ ಹಲವು ವರ್ಷಗಳಿಂದ ‘ಆಧಾರ್’ ಪದ ಬಳಕೆಯಲ್ಲಿದ್ದರೂ , 2010ರಲ್ಲಿ ಭಾರತೀಯ ವಿಶಿಷ್ಟ ಗುರುತು ಸಂಖ್ಯೆ(ಆಧಾರ್ ಕಾರ್ಡ್) ವ್ಯವಸ್ಥೆಯನ್ನು ಭಾರತ ಸರಕಾರ ಜಾರಿಗೊಳಿಸಿದ ಬಳಿಕ ಈ ಪದಕ್ಕೆ ಹೊಸ ವ್ಯಾಖ್ಯಾನ ದೊರೆಯಿತು. 2017ರಲ್ಲಿ ಕೇಂದ್ರ ಸರಕಾರ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಿದ ಬಳಿಕ ಹಾಗೂ ಈ ಕ್ರಮವನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಆಧಾರ್ ಪದ ಅತ್ಯಂತ ಹೆಚ್ಚು ಗಮನ ಸೆಳೆದಿದೆ.

ಹಿಂದಿ ಕವಿ ಅಶೋಕ್ ವಾಜಪೇಯಿ, ಸಾಹಿತಿ, ನಿರ್ಮಾಪಕ ಹಾಗೂ ನಿರ್ದೇಶಕ ಪಂಕಜ್ ದುಬೆ , ಸಿನೆಮ ನಿರ್ಮಾಪಕ ಹಾಗೂ ಸಾಹಿತಿ ಅನು ಸಿಂಗ್ ಚೌಧರಿ ಹಾಗೂ ಹಿಂದಿ ಸಾಹಿತಿ ಚಿತ್ರಾ ಮುದ್ಗಲ್ ಅವರಿದ್ದ ಸಮಿತಿಯು ‘ಆಧಾರ್’ ವರ್ಷದ ಹಿಂದಿ ಪದವೆಂದು ಆಯ್ಕೆ ಮಾಡಿದ್ದು ಶನಿವಾರ (ಜ.27) ನಡೆದ ಜೈಪುರ ಸಾಂಸ್ಕೃತಿಕ ಉತ್ಸವದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News