ತುಳುಭಾಷಿಕರಿಗೆ ಅವಮಾನ : ಗಡಿಪಾರಿಗೆ ತುಳುವೆರ ಜನಪದ ಕೂಟ ಒತ್ತಾಯ

Update: 2018-01-27 18:00 GMT

ಮಡಿಕೇರಿ,ಜ.27:ತುಳುಭಾಷೆ ಮತ್ತು ಸಮುದಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೆಟ್ಟ ರೀತಿಯಲ್ಲಿ ಪ್ರತಿಬಿಂಬಿಸಿ ಹೇಳಿಕೆಗಳನ್ನು ಹಾಕಿರುವ ಬೆಂಗಳೂರಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯದರ್ಶಿ ಎಂದು ಹೇಳಿಕೊಂಡಿರುವ ಜಾನ್ ಧೋರಣೆಯನ್ನು ಖಂಡಿಸುವುದಾಗಿ ತಿಳಿಸಿರುವ ತುಳುವೆರ ಜನಪದ ಕೂಟ, ಆತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ತುಳು ಭಾಷೆ ಮತ್ತು ಸಮುದಾಯವನ್ನು ಕೀಳಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡಿರುವ ವ್ಯಕ್ತಿಯ ಗಡಿಪಾರಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಜ.29 ರಂದು ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದಾಗಿದ್ದು, ಇದರ ಸಾಹಿತ್ಯ ಸಂಸ್ಕೃತಿ ಪರಂಪರೆಗಳ ಹರವು ಅತ್ಯಂತ ವಿಶಾಲವಾದದ್ದು. ಈ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಒಳಪಡಿಸುವ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಹೆಗಡೆಯವರು ಪರಿಶ್ರಮಿಸುತ್ತಿದ್ದಾರೆ. ಇಂತಹ ಭಾಷೆಯ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವುದು ತುಳು ಭಾಷಿಕ ಸಮುದಾಯಗಳಿಗೆ ನೋವನ್ನು ಉಂಟು ಮಾಡಿರುವುದಾಗಿ ರವಿ ತಿಳಿಸಿದರು.

ರಾಜ್ಯಕ್ಕೆ ಒಳಿತನ್ನು ಉಂಟುಮಾಡುವ ಕೆಲಸವನ್ನಷ್ಟೆ ಕನ್ನಡ ಪರ ಸಂಘಟನೆಗಳು ಮಾಡಲಿ ಎಂದು ಮನವಿ ಮಾಡಿಕೊಂಡ ಅವರು ಇದೇ ರೀತಿ ಕೆಲವು ಸಮಯಗಳ ಹಿಂದೆ ತುಳು ಸಮುದಾಯದ ಆರಾಧ್ಯ ದೈವವಾದ ಸ್ವಾಮಿ ಕೊರಗಜ್ಜನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಘಟನೆ ನಡೆದಿದೆ. ಈ ರೀತಿ ಭಾಷೆ-ಭಾಷೆಗಳ ನಡುವೆ ಗೊಂದಲವನ್ನು ಸೃಷ್ಟಿಸಿ ಹಾದಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದೆಂದರು.

ರಾಜ್ಯದಲ್ಲಿ ತನ್ನದೇ ಆದ ವಿಶೇಷ ಮತ್ತು ವೈಶಿಷ್ಟ್ಯಪೂರ್ಣ ಸಂಸ್ಕೃತಿಯನ್ನು ಹೊಂದಿರುವ ತುಳು ಭಾಷಿಕರು ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ತುಳುಭಾಷಿಕರ ಕೊಡುಗೆ ಅಪಾರವಾಗಿದ್ದು, ಜನರ ಭಾವನೆಗಳಿಗೆ ದಕ್ಕೆ ಉಂಟು ಮಾಡುವ ಕಾರ್ಯವನ್ನು ಯಾರೇ ಮಾಡಿದರು ಶಿಕ್ಷೆಗೆ ಗುರಿ ಪಡಿಸಬೇಕೆಂದು ರವಿ ಒತ್ತಾಯಿಸಿದರು. 

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಉಪಾಧ್ಯಕ್ಷರಾದ ಬಿ.ಡಿ.ನಾರಾಯಣ್ ರೈ,  ಜಿಲ್ಲಾ ಸಲಹೆಗಾರರಾದ ಎಂ.ಡಿ. ನಾಣಯ್ಯ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪ್ರಭು ರೈ, ಮಡಿಕೇರಿ ತಾಲ್ಲೂಕು ನಿದೇರ್ಶಕರಾದ ಬಿ.ಎಸ್.ಆನಂದ್ ಹಾಗೂ ಮಡಿಕೇರಿ ನಗರಾಧ್ಯಕ್ಷರಾದ ವಿಜಯಲಕ್ಷ್ಮಿ ರವಿ ಶೆಟ್ಟಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News