ಪಕೋಡ ಮಾರುವುದು ಉದ್ಯೋಗವಾದರೆ ಭಿಕ್ಷಾಟನೆ ಕೂಡಾ ಉದ್ಯೋಗವೇ: ಚಿದಂಬರಂ ಲೇವಡಿ

Update: 2018-01-28 06:51 GMT

ಹೊಸದಿಲ್ಲಿ, ಜ.28: ಉದ್ಯೋಗ ಸೃಷ್ಟಿ ಬಗ್ಗೆ ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. ಪಕೋಡ ಮಾರುವುದು ಕೂಡಾ ಉದ್ಯೋಗ ಎನಿಸಿದರೆ, ಭಿಕ್ಷಾಟನೆಯನ್ನು ಕೂಡಾ ಉದ್ಯೋಗಾವಕಾಶ ಎಂದು ಪರಿಗಣಿಸಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಉದ್ಯೋಗಸೃಷ್ಟಿ ವಿಚಾರದಲ್ಲಿ ಸರ್ಕಾರಕ್ಕೆ ಯಾವ ಮಾಹಿತಿಯೂ ಇಲ್ಲ ಎಂದು ಆಪಾದಿಸಿರುವ ಅವರು ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿದ್ದಾರೆ.
"ಪಕೋಡ ಮಾರುವುದು ಕೂಡಾ ಉದ್ಯೋಗ ಎಂದು ಮೋದಿ ಹೇಳಿದ್ದಾರೆ. ಸೈದ್ಧಾಂತಿಕವಾಗಿ ಭಿಕ್ಷೆ ಬೇಡುವುದು ಕೂಡಾ ಉದ್ಯೋಗ. ಬಡವರು ಮತ್ತು ಅಂಗವಿಕಲರನ್ನು ಜೀವನಾಧಾರಕ್ಕಾಗಿ ಬಲಾತ್ಕಾರದಿಂದ ಭಿಕ್ಷೆ ಬೇಡುವಂತೆ ನಿಯೋಜಿಸಿರುವ ಪ್ರಕರಣಗಳನ್ನು ಲೆಕ್ಕ ಹಾಕಲಿ" ಎಂದವರು ಹೇಳಿದ್ದಾರೆ.

ಜನವರಿ 19ರಂದು ನೀಡಿದ ಟಿವಿ ಸಂದರ್ಶನವೊಂದರಲ್ಲಿ ಮೋದಿ, "ಒಬ್ಬ ವ್ಯಕ್ತಿ ಪಕೋಡ ಮಾರಾಟ ಮಾಡಿ ಪ್ರತಿದಿನ ಸಂಜೆ 200 ರೂಪಾಯಿ ಮನೆಗೆ ಒಯ್ಯುತ್ತಾನೆ ಎಂದಾದರೆ ಇದನ್ನು ಉದ್ಯೋಗ ಎಂದು ಪರಿಗಣಿಸಬೇಡವೇ?" ಎಂದು ಪ್ರಶ್ನಿಸಿದ್ದರು.

ನರೇಗಾ ಫಲಾನುಭವಿಗಳನ್ನು ಕೂಡಾ ಉದ್ಯೋಗಿಗಳು ಎಂದು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. 100 ದಿನಗಳ ಕಾಲ ಉದ್ಯೋಗಿಗಳಾಗಿರುವ ಇವರು 265 ದಿನ ನಿರುದ್ಯೋಗಿಗಳಾಗಿರುತ್ತಾರೆ ಎಂದು ಚಿದಂಬರಂ ಕುಟುಕಿದ್ದಾರೆ. ನಿಜ ಅರ್ಥದಲ್ಲಿ ಉದ್ಯೋಗಾವಕಾಶ ಹೆಚ್ಚಬೇಕಿದ್ದರೆ, ಖಾಸಗಿ ಹೂಡಿಕೆ, ಖಾಸಗಿ ಬಳಕೆ, ರಫ್ತು ಮತ್ತು ಸಾಲದ ಬೇಡಿಕೆ ಹೆಚ್ಚಬೇಕು ಎಂದು ಚಿದಂಬರಂ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News