ಹೇಮಂತ್ ಕರ್ಕರೆ ಸಾವಿನ ತನಿಖೆಗೆ ಹೈಕೋರ್ಟ್ ನಕಾರ

Update: 2018-01-28 13:38 GMT

ಮುಂಬೈ, ಜ.28: ಮಾಜಿ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆಯವರ ಸಾವಿಗೆ ಸಂಬಂಧಪಟ್ಟಂತೆ ತನಿಖೆಗೆ ಆದೇಶ ನೀಡಲು ಬಾಂಬೆ ಉಚ್ಚನ್ಯಾಯಾಲಯ ನಿರಾಕರಿಸಿದೆ. 26/11ರ ಭಯೋತ್ಪಾದಕ ದಾಳಿಯ ವೇಳೆ ಮೃತಪಟ್ಟ ಕರ್ಕರೆಯವರ ಸಾವು ಬಲಪಂಥೀಯ ತೀವ್ರವಾದಿಗಳ ಸಂಚಾಗಿದೆ ಎಂದು ಆರೋಪಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಬಿಹಾರದ ಮಾಜಿ ಶಾಸಕರಾದ ರಾಧಾಕಾಂತ್ ಯಾದವ್ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಯಲ್ಲಿ ಜೀವವೇ ಇಲ್ಲ ಎಂದು ನ್ಯಾಯಾಧೀಶರಾದ ಎಸ್.ಸಿ ಧರ್ಮಾಧಿಕಾರಿ ಮತ್ತು ಭಾರತಿ ದಂಗ್ರಿಯವರ ವಿಭಾಗಿಯ ಪೀಠವು ತಿಳಿಸಿದೆ. ಈ ಪಿಐಎಲ್ 2010ರಿಂದ ಬಾಕಿಯುಳಿದಿದ್ದು, ಅದರಲ್ಲಿ ಜೀವವೇ ಇಲ್ಲ. ನಾವು ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ಹಾಗಾಗಿ ಈ ಅರ್ಜಿಯನ್ನು ತಿರಸ್ಕರಿಸುತ್ತಿದ್ದೇವೆ ಎಂದು ಪೀಠವು ತಿಳಿಸಿದೆ.

ಹೇಮಂತ್ ಕರ್ಕರೆಯವರನ್ನು ಪಾಕಿಸ್ತಾನಿ ಉಗ್ರರಾದ ಅಜ್ಮಲ್ ಕಸಬ್ ಮತ್ತು ಅಬು ಇಸ್ಮಾಯೀಲ್ ಕೊಂದಿಲ್ಲ ಬದಲಾಗಿ ಬಲಪಂಥೀಯ ತೀವ್ರವಾದಿಗಳ ಸಂಚಿನಿಂದ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಯಾದವ್ ತಮ್ಮ ದಾವೆಯಲ್ಲಿ ಆರೋಪಿಸಿದ್ದರು.

ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಬಲಪಂಥೀಯ ಗುಂಪು ಅಭಿನವ ಭಾರತದ ಹಲವು ಸದಸ್ಯರನ್ನು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿಸಿದ್ದರು. ಈ ಕಾರಣದಿಂದಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಯಾದವ್ ಆರೋಪಿಸಿದ್ದರು.

ಮಹಾರಾಷ್ಟ್ರದ ಮಾಜಿ ಪೊಲೀಸ್ ಪ್ರಧಾನ ನಿರ್ದೇಶಕರಾದ ಎಸ್.ಎಂ ಮುಶ್ರಿಫ್ ಅವರು ಬರೆದ, ‘ಹೂ ಕಿಲ್ಡ್ ಕರ್ಕರೆ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದ ಮಾಹಿತಿಗಳ ಆಧಾರದಲ್ಲಿ ಈ ಪಿಐಎಲ್ ಹಾಕಲಾಗಿತ್ತು. 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ ಮತ್ತು ವಿಜಯ್ ಸಾಲಸ್ಕರ್ ಇದ್ದ ವಾಹನದ ಮೇಲೆ ಅಜ್ಮಲ್ ಕಸಬ್ ಮತ್ತು ಅಬು ಇಸ್ಮಾಯೀಲ್ ಗುಂಡಿನ ದಾಳಿ ನಡೆಸಿದ ಪರಿಣಾಮ ಅವರೆಲ್ಲರೂ ಸ್ಥಳದಲ್ಲೇ ಅಸುನೀಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News