ನಿತೀಶ್ ತಕರಾರು: ಬಿಜೆಪಿಗೆ ಹೊಸ ತಲೆ ನೋವು

Update: 2018-01-29 06:20 GMT

ಹೊಸದಿಲ್ಲಿ, ಜ.29: ಬಿಜೆಪಿ ಜತೆ ಮೈತ್ರಿಯನ್ನು ಮುಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮುಂದುವರಿಸುವುದಿಲ್ಲ ಎಂದು ಶಿವಸೇನೆ ಹೇಳಿದ ಬೆನ್ನಲ್ಲೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ತಮ್ಮ ತೆಲುಗು ದೇಶಂ ಪಕ್ಷ ಮತ್ತು ಬಿಜೆಪಿ ನಡುವಿನ ಮೈತ್ರಿ ಅಪಾಯದಲ್ಲಿದೆ ಎಂದು ಹೇಳಿದ್ದರು. ಬಿಜೆಪಿಯ ಸಂಕಷ್ಟ ಸಾಲದೆಂಬಂತೆ ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ತಕರಾರೆತ್ತಿರುವುದು ಹೊಸ ತಲೆ ನೋವಾಗಿ ಪರಿಣಮಿಸಿದೆ.

ಬಿಹಾರದಲ್ಲಿನ ಒಟ್ಟು 40 ಲೋಕಸಭಾ ಸ್ಥಾನಗಳ ಪೈಕಿ ಜೆಡಿಯು ಪಕ್ಷಕ್ಕೆ ಒಂಬತ್ತು ಸೀಟುಗಳಿಗಿಂತ ಹೆಚ್ಚಿನ ಸೀಟುಗಳನ್ನು ಬಿಟ್ಟು ಕೊಡಲು ಬಿಜೆಪಿ ನಿರಾಕರಿಸಿರುವುದೇ ಪ್ರಸಕ್ತ ಸಮಸ್ಯೆಗೆ ಕಾರಣವಾಗಿದೆ.

ಬಿಹಾರದ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಯು 71 ಸ್ಥಾನಗಳನ್ನು ಹೊಂದಿದ್ದರೆ ಬಿಜೆಪಿ ಬಳಿ 52 ಸ್ಥಾನಗಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಯು 38 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಬಿಜೆಪಿ ತನ್ನ ಮಿತ್ರ ಪಕ್ಷಗಳಾದ ಲೋಕ ಜನಶಕ್ತಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ ಒಟ್ಟು 31 ಸ್ಥಾನಗಳನ್ನು ಪಡೆದಿದ್ದರೆ, ಉಳಿದ ಏಳು ಕ್ಷೇತ್ರಗಳು ಆರ್‌ಜೆಡಿ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಾಲಾಗಿದ್ದವು.

2009ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿ ಜೆಡಿಯು 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ 15 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು, 2004 ಚುನಾವಣೆಯಲ್ಲೂ ಇದೇ ರೀತಿ ನಡೆದಿತ್ತು.

ವಾರದ ಹಿಂದೆ ದಿಲ್ಲಿಗೆ ತೆರಳಿದ್ದ ನಿತೀಶ್ ಈ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗುವ ಉದ್ದೇಶ ಹೊಂದಿದ್ದರೂ ತೀವ್ರ ಕೆಲಸದ ಒತ್ತಡಗಳಿಂದಾಗಿ ಶಾ ಅವರನ್ನು ಭೇಟಿಯಾಗಿರಲಿಲ್ಲ. ಕೊನೆಗೆ ನಿತೀಶ್ ತಾವು ಹೇಳಬೇಕಾಗಿದ್ದನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರ ಜತೆ ಹೇಳಿಕೊಂಡಿದ್ದರು.

ಜೆಡಿಯುವಿಗೆ ಇರುವ ಇನ್ನೊಂದು ಸಮಸ್ಯೆಯೆಂದರೆ ಅದಕ್ಕೆ ಬಿಜೆಪಿ ನೀಡಬಯಸಿದ ಕೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಮುಸ್ಲಿಂ, ಯಾದವ ಮತದಾರರ ಪ್ರಾಬಲ್ಯವಿದ್ದು, ಇವರೆಲ್ಲಾ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪರ ಮತ ಚಲಾಯಿಸುವವರೆಂದೇ ತಿಳಿಯಲಾಗಿದೆ. ಪುರ್ಣಿಯಾ ಮತ್ತು ನಲಂದಾ ಕ್ಷೇತ್ರಗಳಲ್ಲಿ ಜೆಡಿಯು ಸಂಸದರಿದ್ದರೆ, ಅರಾರಿಯಾ, ಮಾಧೇಪುರ, ಭಗಲ್ಪುರ್ ಮತ್ತು ಬಂಕಾ ಕ್ಷೇತ್ರಗಳಲ್ಲಿ ಆರ್‌ಜೆಡಿ ಸಂಸದರಿದ್ದಾರೆ. ಸುಪೌಲ್ ಹಾಗೂ ಕಿಶನ್ ಗಂಜ್ ನಲ್ಲಿ ಕಾಂಗ್ರೆಸ್ ಹಾಗೂ ಕಟಿಹಾರ್ ನಲ್ಲಿ ಎನ್‌ಸಿಪಿ ಸಂಸದರಿದ್ದಾರೆ.

ಆದರೆ ನಿತೀಶ್ ಅವರು ಬಿಜೆಪಿಯ ಮಾತಿಗೆ ಒಪ್ಪುತ್ತಾರೆಯೋ ಇಲ್ಲವೇ ಇನ್ನೊಂದು ಬಂಡಾಯ ಹೂಡಿ ಮೈತ್ರಿಯಿಂದ ಹೊರಬರುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News