ಮಾಲೆಗಾಂವ್ ಸ್ಪೋಟ ಪ್ರಕರಣ: ಮಹಾರಾಷ್ಟ್ರ ಸರಕಾರ, ಎನ್‌ಐಎಯಿಂದ ಪ್ರತಿಕ್ರಿಯೆ ಕೋರಿದ ಸುಪ್ರಿಂ

Update: 2018-01-29 14:54 GMT

ಹೊಸದಿಲ್ಲಿ, ಜ. 29: ತನ್ನ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ವಾದ ಪ್ರಶ್ನಿಸಿ ಮಾಲೆಗಾಂವ್ ಸ್ಪೋಟ ಪ್ರಕರಣದ ಆರೋಪಿ ಲೆ. ಕರ್ನಲ್ ಶ್ರೀಕಾಂತ್ ಪುರೋಹಿತ್ ಸಲ್ಲಿಸಿರುವ ಮನವಿ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹಾರಾಷ್ಟ್ರ ಸರಕಾರ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನಿರ್ದೇಶಿಸಿದೆ.

ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಮಹಾರಾಷ್ಟ್ರ ಸರಕಾರ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನ್ಯಾಯಮೂರ್ತಿ ಆರ್.ಕೆ. ಅಗರ್ವಾಲ್ ಹಾಗೂ ಎ.ಎಂ. ಸಪ್ರೆ ಅವರನ್ನು ಒಳಗೊಂಡ ನ್ಯಾಯಪೀಠ ನಿರ್ದೇಶಿಸಿದೆ.

ಈ ಪ್ರಕರಣದ ವಿಚಾರಣೆಯನ್ನು ನಿಲ್ಲಿಸುವಂತೆ ಕೂಡ ಪುರೋಹಿತ್ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪುರೋಹಿತ್ ಅವರ ಮನವಿಯನ್ನು ಸಮೀರ್ ಕುಲಕರ್ಣಿ ಅವರ ಮನವಿಯೊಂದಿಗೆ ಕಳೆದ ವರ್ಷ ಡಿಸೆಂಬರ್ 18ರಂದು ಬಾಂಬೆ ಉಚ್ಚ ನ್ಯಾಯಾಲಯ ತಳ್ಳಿ ಹಾಕಿತ್ತು. ಇವರಿಬ್ಬರು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳು.

ಯುಎಪಿಎ ಕಾಯ್ದೆ ಅಡಿ ರಾಜ್ಯ ಕಾನೂನು ಹಾಗೂ ನ್ಯಾಯಾಂಗ ಇಲಾಖೆ, ವಾದಿಸುವ ಮಂಡಳಿ ಸೂಕ್ತ ಪ್ರಾಧಿಕಾರದಿಂದ ವರದಿ ಪಡೆಯುವಂತೆ ಪುರೋಹಿತ್ ಹಾಗೂ ಕುಲಕರ್ಣಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.

ಜನವರಿ 2009ರಲ್ಲಿ ಅನುಮತಿ ನೀಡಲಾಯಿತು. ಆದರೆ, 2010ರಲ್ಲಿ ಪ್ರಾಧಿಕಾರವನ್ನು ನೇಮಕಗೊಳಿಸಲಾಯಿತು ಎಂದು ಪುರೋಹಿತ್ ಈ ಪ್ರಕರಣದಲ್ಲಿ ಪ್ರತಿಪಾದಿಸಿದ್ದಾರೆ. ಅನಂತರ ಈ ಪ್ರಕರಣದಲ್ಲಿ ಪುರೋಹಿತ್ ಹಾಗೂ ಕುಲಕರ್ಣಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News