ಏಕಕಾಲಿಕ ಚುನಾವಣೆಗಳಿಗೆ ರಾಷ್ಟ್ರಪತಿ ಒತ್ತು

Update: 2018-01-29 18:05 GMT

ಹೊಸದಿಲ್ಲಿ,ಜ.29: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪರಿಕಲ್ಪನೆಯನ್ನು ಸೋಮವಾರ ಬೆಂಬಲಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಆಗಾಗ್ಗೆ ಚುನಾವಣೆಗಳನ್ನು ನಡೆಸುವುದರಿಂದ ಮಾನವ ಸಂಪನ್ಮೂಲಗಳ ಮೇಲೆ ಭಾರೀ ಹೊರೆ ಬೀಳುತ್ತದೆ ಮತ್ತು ಮಾದರಿ ನೀತಿ ಸಂಹಿತೆಯ ಘೋಷಣೆಯಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗುತ್ತದೆ ಎಂದು ಪ್ರತಿಪಾದಿಸಿದರು.

ಆದ್ದರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ಗಳನ್ನು ನಡೆಸುವ ವಿಷಯದ ಬಗ್ಗೆ ಸುಸ್ಥಿರ ಚರ್ಚೆಯು ಅಗತ್ಯವಾಗಿದೆ ಮತ್ತು ಎಲ್ಲ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಒಮ್ಮತಕ್ಕೆ ಬರಬೇಕಾಗಿದೆ ಎಂದು ರಾಷ್ಟ್ರಪತಿಗಳು ಮುಂಗಡಪತ್ರ ಅಧಿವೇಶನದ ಮೊದಲ ದಿನ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ತನ್ನ ಭಾಷಣದಲ್ಲಿ ಹೇಳಿದರು.

1999ರಲ್ಲಿ ಕಾನೂನು ಆಯೋಗವು ಏಕಕಾಲಿಕ ಚುನಾವಣೆಗಳನ್ನು ನಡೆಸುವ ಸಲಹೆಯನ್ನು ನೀಡಿದ್ದು, ಆಗಿನಿಂದಲೂ ದೇಶವು ‘ಒಂದು ರಾಜ್ಯ ಒಂದು ಚುನಾವಣೆ’ ಬಗ್ಗೆ ಚರ್ಚಿಸುತ್ತಲೇ ಇದೆ. ಸಂಸದೀಯ ಸ್ಥಾಯಿಸಮಿತಿಯೂ 2015ರಲ್ಲಿ ತನ್ನ ವರದಿಯೊಂದರಲ್ಲಿ ಈ ಪರಿಕಲ್ಪನೆಗೆ ಇಂಬು ನೀಡಿತ್ತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು 4,500 ಕೋ.ರೂ.ಗಳು ವೆಚ್ಚವಾಗುತ್ತವೆ ಎಂದು ಅದು ಅಂದಾಜಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಬಗ್ಗೆ ಒಲವು ಹೊಂದಿದ್ದಾರೆ.

‘ಒಂದು ರಾಷ್ಟ್ರ ಒಂದು ಚುನಾವಣೆ’ ಗುರಿಯನ್ನು ಸಾಧಿಸಲು ಎಲ್ಲ ರಾಜ್ಯಗಳಲ್ಲದಿ ದ್ದರೂ ಸುಮಾರು ಒಂದು ಡಝನ್ ರಾಜ್ಯಗಳಲ್ಲಿ ಅವಧಿಗೆ ಮುನ್ನವೇ ಚುನಾವಣೆಗಳನ್ನು ನಡೆಸುವ ಬಗ್ಗೆ ಸರಕಾರವು ಪರಿಶೀಲಿಸುತ್ತಿದೆ ಎಂಬ ಊಹಾಪೋಹಕ್ಕೆ ರಾಜಕೀಯ ಪಕ್ಷಗಳಿಗೆ ರಾಷ್ಟ್ರಪತಿಗಳ ಇಂದಿನ ಸಲಹೆ ಇನ್ನಷ್ಟು ಪುಷ್ಟಿ ನೀಡಲಿದೆ.

ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ತನ್ನ ಚೊಚ್ಚಲ ಭಾಷಣದಲ್ಲಿ ರಾಷ್ಟ್ರಪತಿಗಳು ಮಹಿಳೆಯರು ಮತ್ತು ಬಡವರನ್ನು ಗುರಿಯಾಗಿಸಿಕೊಂಡಿರುವ ಮೋದಿ ಸರಕಾರದ ಹಲವಾರು ಜನಪರ ಯೋಜನೆಗಳನ್ನೂ ಪಟ್ಟಿ ಮಾಡಿದರು.

 ಸಂವಿಧಾನದ ಮೂಲತತ್ತ್ವಗಳಿಂದ ನಿರ್ದೇಶಿತವಾಗಿರುವ ಮತ್ತು ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ಕಟಿಬದ್ಧವಾಗಿರುವ ತನ್ನ ಸರಕಾರವು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಮತ್ತು ಶ್ರೀಸಾಮಾನ್ಯನ ಬದುಕನ್ನು ಸುಲಭವಾಗಿಸಲು ಶ್ರಮಿಸುತ್ತಿದೆ ಎಂದ ಅವರು, ಬಿಪಿಎಲ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಅವರಿಗೆ ಬ್ಯಾಂಕ್ ಖಾತೆ ಸೌಲಭ್ಯ, ಶೌಚಾಲಯಗಳ ನಿರ್ಮಾಣ, ಹೆಣ್ಣುಮಕ್ಕಳಿಗೆ ಶಿಕ್ಷಣ ಕಾರ್ಯಕ್ರಮ, ಯುವ ಉದ್ಯಮಿಗಳಿಗೆ ಹೆಚ್ಚಿನ ಬ್ಯಾಂಕ್ ಸಾಲ ಮತ್ತು ಇಂತಹುದೇ ಇತರ ಉಪಕ್ರಮಗಳನ್ನು ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದರು.

ಕೃಷಿಕರಿಗಾಗಿ ಮೋದಿ ಸರಕಾರದ ಕಾರ್ಯಗಳನ್ನು ವಿವರವಾಗಿ ಪಟ್ಟಿ ಮಾಡಿದ ಅವರು, ಕೇಂದ್ರದ ನೀತಿಗಳು ಅವರ ಬವಣೆಗಳನ್ನು ನೀಗಿಸಲು ಮಾತ್ರ ಸೀಮಿತವಾಗಿಲ್ಲ, ಅವು ಕೃಷಿವೆಚ್ಚವನ್ನು ತಗ್ಗಿಸುವ ಉದ್ದೇಶವನ್ನೂ ಹೊಂದಿವೆ ಎಂದರು. 2022ರ ವೇಳೆಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸಲು ತನ್ನ ಸರಕಾರವು ಬದ್ಧವಾಗಿದೆ ಎಂದರು.

ತ್ರಿವಳಿ ತಲಾಖ್ ವಿಧೇಯಕದ ಅಂಗೀಕಾರವನ್ನು ಬಲವಾಗಿ ಪ್ರತಿಪಾದಿಸಿದ ಅವರು, ರಾಜಕಿಯ ಲಾಭಕ್ಕಾಗಿ ಮುಸ್ಲಿಂ ಮಹಿಳೆಯರ ಘನತೆಯು ದಶಕಗಳಿಂದಲೂ ಒತ್ತೆಯಾಳಾಗಿತ್ತು ಎಂದು ಹೇಳಿದರು.

ಸರಕಾರವು ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ವಿಧೇಯಕವನ್ನು ಮಂಡಿಸಿತ್ತು. ಲೋಕಸಭೆಯು ಅದನ್ನು ಅಂಗೀಕರಿಸಿದೆಯಾದರೂ ಸರಕಾರಕ್ಕೆ ಅಗತ್ಯ ಸದಸ್ಯಬಲದ ಕೊರತೆಯಿಂದಾಗಿ ಅದಿನ್ನೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿಲ್ಲ.

 ಮೋದಿ ಸರಕಾರವು ಅಲ್ಪಸಂಖ್ಯಾತರ ಸಬಲೀಕರಣಕ್ಕೆ ಕಟಿಬದ್ಧವಾಗಿದೆ, ತುಷ್ಟೀಕರಣಕ್ಕಲ್ಲ ಎಂದು ಹೇಳಿದ ಕೋವಿಂದ್, ಪುರುಷ ಸಂಬಂಧಿಯಿಲ್ಲದೆ 45ಕ್ಕೂ ಅಧಿಕ ಮಹಿಳೆಯರಿಗೆ ಹಝ್ ಯಾತ್ರೆಗೆ ಅವಕಾಶದಂತಹ ಉದಾಹರಣೆಗಳನ್ನು ಪಟ್ಟಿ ಮಾಡಿದರು.

ಸಮಾಜದ ದುರ್ಬಲ ಮತ್ತು ಶೋಷಿತ ವರ್ಗಗಳ ಉದ್ಧಾರ ಮತ್ತು ಘನತೆ ಸರಕಾರದ ಆದ್ಯತೆಯಾಗಿದೆ ಮತ್ತು ಅದು ಸಮಾಜದ ಪ್ರತಿಯೊಂದೂ ವರ್ಗದ ಆಕಾಂಕ್ಷೆಗಳಿಗೆ ಸಂವೇದನಾಶೀಲವಾಗಿದೆ ಎಂದ ಅವರು, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ಒದಗಿಸುವ ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಹಿಂದುಳಿದ ವರ್ಗಗಳ ಉಪ-ವರ್ಗೀಕರಣವನ್ನು ಪರಿಶೀಲಿಸಲು ಆಯೋಗವೊಂದರ ರಚನೆಯನ್ನು ಉದಾಹರಣೆಗಳಾಗಿ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News