"ಯುವಕನೊಂದಿಗೆ ನಿರ್ಭಯಾ ತಡರಾತ್ರಿ ಏಕೆ ಹೋಗಬೇಕಿತ್ತು?"

Update: 2018-01-30 06:44 GMT

ರಾಯಪುರ, ಜ.30: "ಹುಡುಗಿಯರ ಮೈಮಾಟ ಬಿಚ್ಚಿಡುವ ಉಡುಗೆಯಿಂದ ನಿರ್ಭಯಾ ಗ್ಯಾಂಗ್‌ರೇಪ್‌ನಂಥ ಕೃತ್ಯಗಳಿಗೆ ಪ್ರಚೋದನೆಯಾಗುತ್ತದೆ; ನಿರ್ಭಯಾಳಂಥ ಹೊರಗೆ ತಿರುಗಾಡುವ ಹುಡುಗಿಯರು ಇಂಥದ್ದನ್ನು ಎಳೆದುಕೊಳ್ಳುತ್ತಾರೆ" ಇದು ಇಲ್ಲಿನ ಕೇಂದ್ರೀಯ ವಿದ್ಯಾಲಯ ಶಿಕ್ಷಕಿಯ ಬಯಾಲಜಿ ಕ್ಲಾಸ್‌ನ ತುಣುಕು.

ಬಾಲಕರ ಸಮ್ಮುಖದಲ್ಲೇ ಜೀವಶಾಸ್ತ್ರ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಈ ಪ್ರವಚನ ನೀಡಿದ ಶಿಕ್ಷಕಿ ಶಂಖ್ವಾರ್ ಇದೀಗ ಪೇಚಿಗೆ ಸಿಲುಕಿಕೊಂಡಿದ್ದಾರೆ. ಈ ಪಾಠ ಕೇಳಿದ ವಿದ್ಯಾರ್ಥಿನಿಯರ ಪೋಷಕರು ಸೋಮವಾರ ಪ್ರಾಚಾರ್ಯ ಭಗವಾನ್‌ದಾಸ್ ಅಹಿರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳಿಂದ ಅನಾಮಧೇಯ ಪತ್ರವೂ ಬಂದಿದೆ ಎಂದು ಪ್ರಾಚಾರ್ಯರು ಒಪ್ಪಿಕೊಂಡಿದ್ದಾರೆ.

9 ಮತ್ತು 11ನೇ ತರಗತಿಯ ವಿದ್ಯಾರ್ಥಿನಿಯರು ಈ "ಕೌನ್ಸೆಲಿಂಗ್ ಸೆಷನ್"ನ ಧ್ವನಿಮುದ್ರಣವನ್ನು ರಹಸ್ಯವಾಗಿ ಮಾಡಿಕೊಂಡು ಮಾನಸಿಕ ಕಿರುಕುಳಕ್ಕೆ ಪುರಾವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಲಿಪ್‌ಸ್ಟಿಕ್ ಹಚ್ಚುವುದು ಮತ್ತು ಜೀನ್ಸ್ ಧರಿಸುವುದರ ವಿರುದ್ಧ ಎಚ್ಚರಿಸಿರುವ ಶಿಕ್ಷಕ "ಯಾವ ಹುಡುಗಿಯ ಮುಖ ಸುಂದರವಾಗಿಲ್ಲವೋ ಆಗ ಮಾತ್ರ ಆಕೆ ಮೈಮಾಟ ಪ್ರದರ್ಶಿಸುತ್ತಾಳೆ. ಹುಡುಗಿಯರ ವರ್ತನೆ ಎಷ್ಟು ನಾಚಿಕೆಗೇಡು ಎಂದರೆ, ಗಂಡನಲ್ಲದ ಯುವಕನೊಂದಿಗೆ ನಿರ್ಭಯಾ ತಡರಾತ್ರಿ ಏಕೆ ಹೋಗಬೇಕಿತ್ತು? ಇದನ್ನು ವಿವಾದವಾಗಿ ಏಕೆ ಮಾಡಲಾಯಿತು ಎನ್ನುವುದು ಅರ್ಥವಾಗುತ್ತಿಲ್ಲ. ಇಂಥ ಘಟನೆಗಳು ಗುಡ್ಡಗಾಡು ಪ್ರದೇಶಗಳಲ್ಲಿ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ನಿರ್ಭಯಾ ತಾಯಿ ಆಕೆಯನ್ನು ತಡರಾತ್ರಿ ಹೊರಹೋಗಲು ಅವಕಾಶ ನೀಡಬಾರದಿತ್ತು" ಎಂದು ಬೋಧಿಸಿದ್ದಾಗಿ ತಿಳಿದುಬಂದಿದೆ.

ಇದು ನಿರ್ಭಯಾಳ ತಪ್ಪೇ ವಿನಃ ಹುಡುಗರದ್ದಲ್ಲ ಎನ್ನುವುದು ಶಿಕ್ಷಕಿಯ ಸ್ಪಷ್ಟ ಅಭಿಮತ. "ಇಂಥ ಹುಡುಗಿಯರಿಗೆ ಇದು ಶಾಪ. ಅವರಿಗೆ ಅದು ಶಿಕ್ಷೆ" ಎಂದು ಶಿಕ್ಷಕಿ ಹೇಳುವುದು ಬಿಡುಗಡೆಯಾದ ಆಡಿಯೊ ತುಣುಕಿನಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. "ಹುಡುಗಿ ಒಬ್ಬ ವ್ಯಕ್ತಿಯ ಜತೆ "ಅದನ್ನು ಮಾಡುವಾಗ" ಆಕೆ ಬೇರೆಯವರ ಜತೆಯೂ "ಹಾಗೆ ಮಾಡುತ್ತಾಳೆ" ಎಂದು ಭಾವಿಸುವುದು ಸಹಜ ಎಂದು ಶಿಕ್ಷಕಿ ಹೇಳುತ್ತಿರುವುದು ಕೇಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News