ಪ್ರತ್ಯೇಕತೆ, ಜಾತಿವಾದ ತೊಲಗಿಸಲು ಎಲ್ಲರೂ ಒಂದಾಗಬೇಕು: ಎಚ್.ಎಸ್.ದೊರೆಸ್ವಾಮಿ

Update: 2018-01-30 14:50 GMT

ತುಮಕೂರು,ಜ.30: ದೇಶದಲ್ಲಿ ಹೆಚ್ಚುತ್ತಿರುವ ಪ್ರತ್ಯೇಕತಾ ಮನೋಭಾವ ಮತ್ತು ಜಾತಿವಾದ ತೊಲಗಿಸಲು ಎಲ್ಲರೂ ಒಂದಾಗಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಲಹೆ ನೀಡಿದ್ದಾರೆ.

ನಗರದ ಟೌನ್‍ಹಾಲ್‍ನಲ್ಲಿ ಸೌಹಾರ್ದ ತುಮಕೂರು ಸಮಿತಿಯಿಂದ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದ ಅವರು, ಇಂದು ಎಲ್ಲೆಡೆ ಪ್ರತ್ಯೇಕತಾ ಭಾವನೆ ಹೆಚ್ಚುತ್ತಿದೆ. ಇದನ್ನು ಹೋಗಲಾಡಿಸಲು ಎಲ್ಲರು ಮುಂದಾಗಬೇಕು. ಮಾನವ ಸರಪಳಿ ನಡೆಸಿರುವುದು ಯಾವುದೇ ಪಕ್ಷದ ಪರವಾಗಿ ಅಲ್ಲ. ಶಾಂತಿ ನೆಮ್ಮದಿ, ಸೌಹಾರ್ದತೆ ಉಳಿಸಲು ಮತ್ತು ಜನರಿಗಾಗಿ ಇದನ್ನು ನಡೆಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ. ಹೀಗಾಗಿ ಜಾತಿ ವಾದಕ್ಕೆ ಯಾರೂ ಕೂಡ ಬೆಂಬಲ ನೀಡಬಾರದು. ಜನತೆ ಸೌಹಾರ್ದತೆ ಯಿಂದ ಬಾಳ್ವೆ ನಡೆಸಲು ಪಣ ತೊಡಬೇಕಾಗಿದೆ. ಒಂದು ರಾಷ್ಟ್ರ, ಒಂದು ಜನ ಎಂಬ ಭಾವನೆ ಬೆಳೆಯಬೇಕು. ಆದರೆ ನಮ್ಮಲ್ಲಿನ ದೌರ್ಬಲ್ಯತೆಯನ್ನು ಬಳಸಿಕೊಂಡು ಕೆಲವರು ರಾಜಕೀಯವಾಗಿ ಲಾಭ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಇದನ್ನು ತಡೆಯಬೇಕು. ದಲಿತರು, ಅಲ್ಪಸಂಖ್ಯಾತರು ಕೋಮುವಾದಿಗಳು ಹೆಣೆದ ಜಾಲಕ್ಕೆ ಬೀಳುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು. ರಾಜಕಾರಣದಲ್ಲಿ ಯೋಗ್ಯರು ಬರಬೇಕು. ದೇಶದಲ್ಲಿ ಹೆಚ್ಚುತ್ತಿರುವ ಕೋಮುವಾದ ಅಳಿಯಬೇಕು. ಹೊಸ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಪಣ ತೊಡಬೇಕು ಎಂದು ದೊರೆಸ್ವಾಮಿ ಹೇಳಿದರು.

ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೈರಾಜ್ ಮಾತನಾಡಿ, ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಇದಕ್ಕಾಗಿ ಗಾಂಧೀಜಿಯವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಸೂಫಿ ಸಂತರು, ಬುದ್ದ, ಬಸವ ಮತ್ತು ಗಾಂಧಿಯ ವಿಚಾರಗಳು ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿವೆ. ಕೆಲವರು ಇಂದು ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ದಿವಾಳಿ ಎದ್ದಿವೆ. ಯಾರೊಬ್ಬರೂ ಜನರ ಸಮಸ್ಯೆಗಳು ಏನು ಎಂಬುವುದನ್ನು ಕೇಳುತ್ತಿಲ್ಲ. ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು. 

ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೇಖಕಿಯರಾದ ಡಾ.ಅರುಂಧತಿ, ಮಲ್ಲಿಕಾ ಬಸವರಾಜು, ಉಪನ್ಯಾಸಕ ಶಂಕರ್, ಎಸ್‍ಯುಸಿಐನ ಎಸ್.ಎನ್. ಸ್ವಾಮಿ, ಡಾ. ಮುರಳೀಧರ್, ಪ್ರಾಂತ ರೈತ ಸಂಘದ ಬಿ. ಉಮೇಶ್, ಸೈಯದ್ ಮುಜೀಬ್, ತಾಜುದ್ದೀನ್, ಸೈಯದ್ ಖಲಂದರ್ ಮಾತನಾಡಿದರು.  

ಇದಕ್ಕೂ ಮೊದಲು ಸ್ವಾತಂತ್ರ್ಯ ಚೌಕದಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮಕ್ಕೆ ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶೆಟ್ಟಾಳಯ್ಯ, ಜ್ಞಾನಸಿಂಧು ಸ್ವಾಮಿ, ದರ್ಶನ್, ಲಕ್ಷ್ಮಣ್, ಕೆ.ಈ.ಸಿದ್ದಯ್ಯ, ರಾಮಚಂದ್ರು, ಶ್ರೀಧರ್, ರಾಮು ಉಪಸ್ಥಿತರಿದ್ದರು.

ತುಮಕೂರು ವಿಶ್ವವಿದ್ಯಾಲಯದ ಮುಂಭಾಗ ನಡೆದ ಸೌರ್ಹಾದತೆಗಾಗಿ ಕರ್ನಾಟಕದ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ನಿವೃತ್ತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ರಮೇಶ್, ನಟ ಹನುಮಂತೇಗೌಡ ಕನ್ನಡ ಪ್ರ್ರಾಧ್ಯಾಪಕ ಡಾ. ನಾಗಭೂಷಣ ಬಗ್ಗನಡು, ಉಪನ್ಯಾಸಕರಾದ ಲಕ್ಷ್ಮೀರಂಗಯ್ಯ, ಶಶಿಕಾಂತ್, ನಿಸರ್ಗಪ್ರಿಯ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News