ಯಶವಂತ್ ಸಿನ್ಹಾರ ‘ರಾಷ್ಟ್ರ ಮಂಚ್’ಗೆ ಶತ್ರುಘ್ನ ಸಿನ್ಹಾ ಸೇರ್ಪಡೆ

Update: 2018-01-30 15:48 GMT
ಯಶವಂತ್ ಸಿನ್ಹಾ

ಹೊಸದಿಲ್ಲಿ, ಜ. 30: ಅಸಂತುಷ್ಠ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮಂಗಳವಾರ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ರಾಷ್ಟ್ರ ಮಂಚ್‌ಗೆ ಸೇರಿದ್ದಾರೆ.

 ರಾಜಕೀಯ ಕಾರ್ಯಪಡೆಯಾಗಿರುವ ರಾಷ್ಟ್ರ ಮಂಚ್ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಚಳವಳಿ ಆರಂಭಿಸಲಿದೆ ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ. ರಾಷ್ಟ್ರ ಮಂಚ್‌ನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದ ದಿನೇಶ್ ತ್ರಿವೇದಿ, ಕಾಂಗ್ರೆಸ್ ಸಂಸದೆ ರೇಣುಕಾ ಚೌಧುರಿ, ಎನ್‌ಸಿಪಿ ಸಂಸದ ಮಜೀದ್ ಮೆಮನ್, ಆಪ್‌ನ ಸಂಸದ ಸಂಜಯ್ ಸಿಂಗ್, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತಾ ಹಾಗೂ ಜೆಡಿಯು ನಾಯಕ ಪವನ್ ಕುಮಾರ್ ಸೇರಿದ್ದಾರೆ.

ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಹಾಗೂ ಮಾಜಿ ಕೇಂದ್ರ ಸಚಿವ ಸೋಮ್ ಪಾಲ್ ಹಾಗೂ ಹರ್‌ಮೋಹನ್ ಧವನ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ತನ್ನ ದೃಷ್ಟಿಕೋನಗಳ ಅಭಿವ್ಯಕ್ತಿಗೆ ಪಕ್ಷ ಅವಕಾಶ ನೀಡುತ್ತಿಲ್ಲ. ಆದುದರಿಂದ ನಾನು ರಾಷ್ಟ್ರ ಮಂಚ್ ಸೇರಿದೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

70 ದಿನಗಳ ಹಿಂದೆ ಮಹಾತ್ಮಾ ಗಾಂಧಿ ಅವರ ಹತ್ಯೆಯಾದ ದಿನವಾದ ಇಂದು ಹಾಗೂ ತನ್ನ ರಾಷ್ಟ್ರ ಮಂಚ್‌ನ ಲೋಕಾರ್ಪಣೆ ನಡುವೆ ಸಂಬಂಧ ಕಲ್ಪಿಸಿರುವ ಯಶವಂತ್ ಸಿನ್ಹಾ, ಪ್ರಜಾಪ್ರಭುತ್ವ ಹಾಗೂ ಅದರ ಅಂಗಗಳಿಗೆ ಬೆದರಿಕೆ ಇದೆ ಎಂದಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರನ್ನು ಭಿಕ್ಷುಕರ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News