ಕ್ಯಾಶ್ ಲೆಸ್ ವ್ಯವಹಾರದ ರಾಜ್ಯವಾಗಲಿದೆ ಗೋವಾ

Update: 2018-01-30 17:01 GMT

ಪಣಜಿ, ಜ.30: ಈ ವರ್ಷದ ಅಕ್ಟೋಬರ್‌ನಿಂದ ಗೋವಾ ರಾಜ್ಯ ನಗದುರಹಿತ ಹಾಗೂ ಶೇ.100ರಷ್ಟು ಡಿಜಿಟಲೀಕರಣಗೊಂಡ ವ್ಯವಹಾರದ ರಾಜ್ಯವಾಗಲಿದೆ ಎಂದು ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ತಿಳಿಸಿದ್ದಾರೆ.

 ‘ನಬಾರ್ಡ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾರಿಕ್ಕರ್, ಮುಂದಿನ ತಿಂಗಳು ರಾಜ್ಯ ವಿಧಾನಸಭೆಯಲ್ಲಿ ಮಂಡನೆಯಾಗಲಿರುವ 2018-19ರ ಬಜೆಟ್‌ನಲ್ಲಿ ಶೇ.100 ಡಿಜಿಟಲೀಕರಣದ ವಿವರ ನೀಡಲಾಗುವುದು . ಕಡಿಮೆ ನಗದು ಅಂದರೆ ಕಡಿಮೆ ಭ್ರಷ್ಟಾಚಾರ ಹಾಗೂ ರಾಜ್ಯದ ಆದಾಯದಲ್ಲಿ ಹೆಚ್ಚಳ ಎಂದಿದ್ದಾರೆ.

ಅಕ್ಟೋಬರ್ ತಿಂಗಳ ಬಳಿಕ ತುರ್ತು ಸಂದರ್ಭ ಹೊರತುಪಡಿಸಿ ಸರಕಾರದ ಯಾವುದೇ ಪಾವತಿ ಅಥವಾ ಸ್ವೀಕೃತಿ ನಗದು ರೂಪದಲ್ಲಿ ಇರುವುದಿಲ್ಲ . ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆಯತ್ತ ನಾವು ಸಾಗುತ್ತಿದ್ದೇವೆ. ಎಪ್ರಿಲ್ 1ರ ಬಳಿಕದ ಆರು ತಿಂಗಳಲ್ಲಿ ನಾವು ಸಂಪೂರ್ಣ ಡಿಜಿಟಲೀಕರಣ ವ್ಯವಸ್ಥೆಯನ್ನು ಹೊಂದಿರುತ್ತೇವೆ ಎಂದು ಪಾರಿಕ್ಕರ್ ಹೇಳಿದ್ದಾರೆ.

 ಈಗಾಗಲೇ ಸರಕಾರ ಡಿಜಿಟಲ್ ಪಾವತಿ ವ್ಯವಸ್ಥೆ ಅಥವಾ ಇ-ವ್ಯವಸ್ಥೆಗೆ ರೂಪಾಂತರಗೊಂಡಿದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಪಾವತಿ ಸ್ವೀಕರಿಸಲು ಬೃಹತ್ ಪ್ರಮಾಣದಲ್ಲಿ ಪಿಒಎಸ್ ಯಂತ್ರಗಳ ಅಗತ್ಯವಿದ್ದು , 650 ಪಿಒಎಸ್ ಯಂತ್ರಗಳ ಪೂರೈಕೆಗೆ ಈಗಾಗಲೇ ಎಸ್‌ಬಿಐ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಇವು ಸಾಕಾಗದು ಎಂದು ಪಾರಿಕ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News