ಕೆ.ಆರ್.ಪೇಟೆ: ಜೆಡಿಎಸ್ ವರಿಷ್ಠರ ವಿರುದ್ಧ ಚಲುವರಾಯಸ್ವಾಮಿ, ಝಮೀರ್ ವಾಗ್ದಾಳಿ

Update: 2018-01-30 17:40 GMT

ಕೆ.ಆರ್.ಪೇಟೆ, ಜ.30: ಯಾರ ಹಣೆಬರಹವನ್ನು ಯಾರೂ ಬರೆಯಕ್ಕಾಗಲ್ಲ. ದೇವರು ಮಾತ್ರ ಹಣೆ ಬರಹವನ್ನು ಬರೆಯಬೇಕು. ಆದರೆ, ಕೆಲವರು ನಾವೇ ಚಲುವರಾಯಸ್ವಾಮಿ, ಝಮೀರ್‍ ಅಹಮದ್‍ಖಾನ್ ಅವರ ಹಣೆಬರಹವನ್ನು ಬರೆದವರು ಅಂತ ಹೇಳುತ್ತಾರೆ. ನಾವು ಇತಿಹಾಸ ಕೆದಕಿದರೆ ಏನೇನೋ ಮಾತನಾಡಬೇಕಾಗುತ್ತೆ. ನಾವು ಆ ಕೆಲಸ ಮಾಡುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಕಟ್ಟುವ ಕಡೆ ಮಾತ್ರ ಗಮನವನ್ನು ಹರಿಸೋಣ ಎಂದು ನಾಗಮಂಗಲ ಕ್ಷೇತ್ರದ ಶಾಸಕ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪರೋಕ್ಷವಾಗಿ ಜೆಡಿಎಸ್ ವರಿಷ್ಠರನ್ನು ಟೀಕಿಸಿದ್ದಾರೆ.

ಪಟ್ಟಣದ ಖಾಸಿಂಖಾನ್ ಸಮುದಾಯ ಭವನದ ಆವರಣದಲ್ಲಿ ನಾಗಮಂಗಲ ಅಹಮದ್‍ಖಾನ್ ಅವರ ಅಭಿಮಾನಿಗಳು ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಬಂದಿದ್ದ ಮನ್‍ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಹರಿಹರಪುರ ಜಯಕುಮಾರ್ ಮತ್ತವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿ ಅವರು ಮಾತನಾಡಿದರು. 

ಕುಮಾರಣ್ಣ ಮುಖ್ಯಮಂತ್ರಿಯಾಗಲು ಈ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರ ಕೊಡುಗೆಯೂ ಇದೆ. ಆದರೆ, ಕೃಷ್ಣ ಅವರ ಗತಿಯೇನಾಯ್ತು? ನಾವೇನೋ ಮೋಸ ಮಾಡಿದ್ದೀವಿ. ಅವರು ಮೋಸ ಮಾಡಿಲ್ಲವೆ? ಕೃಷ್ಣ ಅವರಂತಹ ಸಜ್ಜನ ರಾಜಕಾರಣಿ ಇಂದು ರಾಜಕೀಯದಿಂದ ದೂರ ಇರ್ತೀನಿ ಅಂತಿದ್ದಾರೆ. ಇದಕ್ಕೆ ಕಾರಣ ಯಾರು ಎಂಬುದನ್ನು ಈ ಕ್ಷೇತ್ರದ ಜನರು ಅರಿಯಬೇಕು. ಮೋಸದ ಮಾತಿಗೆ ಮರುಳಾಗಬೇಡಿ. ಮಂಡ್ಯದ ಹೆಸರೇಳಿ ರಾಜಕಾರಣ ಮಾಡಿದವರು ಮೋಸ ಮಾಡಿದ್ದರಿಂದ ಜಿಲ್ಲೆಯ ಅಭಿವೃದ್ಧಿಗಾಗಿ ರಾಜಕಾರಣ ಮುಂದುವರಿಸುತ್ತಾ ಇದ್ದೇನೆ ಅಷ್ಟೆ ಎಂದು ಅವರು ತಿಳಿಸಿದರು.

ಮತದಾರರೇ ನಿಜವಾದ ಶಕ್ತಿ:
ಚಾಮರಾಜಪೇಟೆಯ ಶಾಸಕ ಬಿ.ಝಡ್.ಝಮೀರ್ ಅಹಮದ್‍ಖಾನ್ ಮಾತನಾಡಿ, ಯಾವುದೇ ರಾಜಕಾರಣಿಗೆ ನಿಜವಾದ ಶಕ್ತಿಯೆಂದರೆ ಮತದಾರರು ಮತ್ತು ಜನರು. ಯಾವಾಗ ಜನ ರಾಜಕಾರಣಿಗಳಿಂದ ದೂರವಾಗುತ್ತಾರೋ ಆ ದಿನ ಎಂತಹ ರಾಜಕಾರಣಿಯಾದರೂ ಸತ್ತಂತೆ. ಮುಸ್ಲಿಮರು ದುಡ್ಡು ಕೊಟ್ಟರೆ ಓಟ್ ಹಾಕ್ತಾರೆ ಅಂತ ಈ ಕ್ಷೇತ್ರದ ಶಾಸಕ ನಾರಾಯಣಗೌಡ ಹೇಳುತ್ತಿದ್ದಾರೆ. ಮುಸ್ಲಿಮರು ಸ್ವಾಭಿಮಾನಿಗಳು. ನೀವು ನಾರಾಯಣಗೌಡರ ಈ ಅಹಂಕಾರದ ಮಾತಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಾರ್ಟಿ ಸಮುದ್ರವಿದ್ದಂತೆ. ಮುಸಲ್ಮಾನರು ಸಮುದ್ರದ ಸಹವಾಸದಲ್ಲಿರಿ. ಕೊಳಚೆ ಗುಂಡಿಗಳ ಸಹವಾದಲ್ಲಿರಬೇಡಿ. ನಾವೇನು ಜೆಡಿಎಸ್ ಸೇರಿದ ಮೇಲೆ ದುಡ್ಡು ಮಾಡಿದವರಲ್ಲ. ಆದರೆ, ನಮ್ಮ ಮೇಲೆ ಗೂಬೆ ಕೂರಿಸುವ ಇವರು ಪ್ರಮಾಣ ಮಾಡಲು ಬರಲಿ. ನಾವು ಕೂಡಾ ಬರುತ್ತೇವೆ. ಬರಿ ಪೊಳ್ಳು ಮಾತುಗಳನ್ನಾಡಬೇಡಿ ಎಂದು ಅವರು ಹೇಳಿದರು.

ಜೆಡಿಎಸ್ 25 ಸೀಟುಗಳನ್ನೂ ಗೆಲ್ಲಲ್ಲ. ಮುಂದೆ ಸಿದ್ಧರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ. ನಾನು ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಶಾಸಕ ಸ್ಥಾನಕ್ಕೆ ಮತ್ತೆ ಸ್ಪರ್ಧೆ ಮಾಡ್ತೇನೆ. ಇಲ್ಲದಿದ್ದರೆ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯಾಧ್ಯಂತ ಪ್ರವಾಸ ಮಾಡಿ ಸಂಘಟನೆಯ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ನಗರ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ ಜಯಲಕ್ಷ್ಮಿಸ್ವಾಮಿನಾಯಕ್, ಜಿಪಂ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಮಾಜಿ ಸದಸ್ಯರಾದ ಪಾಪೇಗೌಡ,  ಬಿ.ನಾಗೇಂದ್ರಕುಮಾರ್, ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ನಂದೀಶ್, ಎಚ್.ಕೆ.ಅಶೋಕ್, ಕೆ.ಕೆ.ಪುರುಷೋತ್ತಮ್, ತಾಪಂ ಸದಸ್ಯ ಮಾಧವಪ್ರಸಾದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ರಮೇಶ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಜಯರಾಮೇಗೌಡ, ಲೆಕ್ಕಪರಿಶೋಧಕರಾದ ಕಿರಣ್‍ಕುಮಾರ್ ಹಾಗೂ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News